Wednesday 12 September 2012

ಬೇಟೆರಾಯರ ಸನ್ನಿಧಿಯಲ್ಲಿ...

ತುಮಕೂರು ಜಿಲ್ಲೆಯ ತುರುವೇಕೆರೆಗೆ ಭೇಟಿ ಕೊಡುವ ಒಂದು ಅವಕಾಶ ಇತ್ತೀಚಿಗೆ ನನಗೆ ಒದಗಿ ಬಂದಿತ್ತು. ಮೈಸೂರಿನಿಂದ ಪಾಂಡವಪುರ, ನಾಗಮಂಗಲ, ಮಾಯಸಂದ್ರ ಮಾರ್ಗ ತುರುವೆಕೆರೆಗೆ ಕಾರಿನಲ್ಲಿ ಕೇವಲ ಎರಡೂವರೆ ತಾಸಿನ ಪ್ರಯಾಣ. ಪಾಂಡವಪುರದ ಸಮೀಪ  6-8 ಕಿ.ಮಿ. ಬಿಟ್ಟರೆ, ಉಳಿದ ಮಾರ್ಗ ಯಾವ ವಿದೇಶಿ ರಸ್ತೆಗೂ ಕಡಿಮೆಯಿಲ್ಲ. ಬಹಳ ಸೊಗಸಾದ ರಸ್ತೆ. ಇಕ್ಕೆಲಗಳಲ್ಲಿ ಪ್ರಾಕೃತಿಕ ಸೊಬಗನ್ನು ಸವಿಯುತ್ತ ದಾರಿ ಸವೆಯುವುದೇ ತಿಳಿಯುವುದಿಲ್ಲ.

ತುರುವೇಕೆರೆ ಒಂದು ಸಣ್ಣ ಪ್ರಾಚೀನ ಪಟ್ಟಣ. ಇಂದಿನ ಜನ ಸಂಖ್ಯೆ ಬಹುಷಃ 20,000 ಮೀರಿರಲಾರದು. ಕೃಷಿ ಮುಖ್ಯ ಕಸುಬು. ಸಣ್ಣ-ಪುಟ್ಟ ವ್ಯಾಪಾರ ವ್ಯವಹಾರ ಇತ್ತೀಚಿನದು. ಕೆರೆಯ ನೀರೇ ಜೀವಾಧಾರ. ಮಳೆ ಕಡಿಮೆ ಬೀಳುವ ಬಯಲು ಪ್ರದೇಶವಾದುದರಿಂದ ಬಾವಿಯಲ್ಲಿ ನೀರಿಗೂ ಬಹಳ ತ್ರಾಸ ಪಡಬೇಕಾದ ಪರಿಸ್ತಿತಿ. ಅನೇಕ ಬಾವಿಗಳು ಬತ್ತಿವೆ. ಹೇಮಾವತಿ ಜಲಾಶಯದಿಂದ ಇಲ್ಲಿನ ಕೆರೆಗೆ ನೀರುಣಿಕೆ ಮಾಡಿದಾಗ ಸ್ವಲ್ಪ ನೆಮ್ಮದಿ.

ಇಂತಹ ಪುರಾತನ ಪಟ್ಟಣದ ವಿಶೇಷ ಇಲ್ಲಿನ ಪ್ರಾಚೀನ ಸುಂದರ ಗುಡಿಗಳು. ಊರಿನ ತುಂಬೆಲ್ಲಾ ಹತ್ತಾರು ಸಣ್ಣ-ಪುಟ್ಟ ಗುಡಿಗಳು, ಐದಾರು ದೇವಾಲಯಗಳು ಅಂದಿನ ಕಲಾ ವೈಭವ ಹಾಗೂ ಸಾಮರಸ್ಯ ಜೀವನ ಶೈಲಿಯನ್ನು ಎತ್ತಿ ಸಾರುತ್ತಿವೆ. ಶೈವ ದೇವಾಲಯದ ಪಕ್ಕದಲ್ಲೇ ವಿಷ್ಣು ದೇವಾಲಯವಿದೆ. ಎರಡನ್ನೂ ಹೊಯ್ಸಳರ ಕಾಲದಲ್ಲಿ ಕಟ್ಟಿರುವುದಕ್ಕೆ ಪುರಾವೆಗಳಿವೆ. ದೇವಾಲಯಗಳ ಮೇಲೆ ಹೊರ ಧಾಳಿಗಳಾಗಿ, ಅನೇಕ ವಿಗ್ರಹಗಳು ವಿರೂಪಗೊಂಡಿವೆ. ಇಂದಿನ ಜೀವನ ಶೈಲಿಯೋ, ಪುರಾತನ ದೇಗುಲಗಳ ಬಗ್ಗೆ ತಾತ್ಸಾರವೋ, ಸರಕಾರದ ನಿರ್ಲಕ್ಷ್ಯವೋ, ಒಟ್ಟಿನಲ್ಲಿ ಯಾವ ದೇಗುಲವನ್ನೂ ಸರಿಯಾಗಿ ಕಾಪಾಡದೆ ಅಂದಿನ ಕುರುಹುಗಳನ್ನು ನಾವೇ ಹಾಳು ಮಾಡುತ್ತಿದ್ದೇವೆನಿಸುತ್ತದೆ. ಶಂಕರೇಶ್ವರ, ಚನ್ನಕೇಶವ ಮುಂತಾದ ಹೊಯ್ಸಳರ ಕಾಲದ ದೇವಾಲಯಗಳಿಗೆ ಬಹುಷಃ ಅರ್ಚಕರೊಬ್ಬರನ್ನು ಬಿಟ್ಟರೆ ಬೇರಾರೂ ಈಗ ಸಾಮಾನ್ಯ ದಿನಗಳಲ್ಲಿ ಭೇಟಿ ಕೊಡುವ ಹಾಗೆ ಗೋಚರಿಸುವುದಿಲ್ಲ. ಸರಿಯಾದ ರಕ್ಷಣೆ ಇಲ್ಲದೆ ಕಟ್ಟಡಗಳು ನಲುಗುತ್ತಿವೆ.

ಪಟ್ಟಣದ ಮುಖ್ಯ ದೇವಾಲಯ ಶ್ರೀ ಬೇಟೆರಾಯ ಸ್ವಾಮಿಯದು. 1242ರಲ್ಲಿ ಪ್ರತಿಷ್ಠಾಪಿತವಾದ ಸುಂದರ ದೇವ ಮೂರ್ತಿ. ದ್ವಾಪರ ಯುಗಾಂತ್ಯದಲ್ಲಿ ಮ್ರುಕಂಡು ಮುನಿ ಹಾಗು ಚಂದ್ರ ಚೂಡ ಮುನಿಗಳು ಈ ಸ್ಥಳದಲ್ಲಿ ತಪಸ್ಸು ಮಾಡುವಾಗ, ರಾಕ್ಷಸರು ಮೃಗ ರೂಪ ಧರಿಸಿಕೊಂಡು ಬಂದು ಇವರನ್ನು ಮತ್ತು ಪ್ರಜೆಗಳನ್ನು ಹಿಂಸಿಸುತ್ತಿರಲು, ತಪಸ್ವಿಗಳು ಮಹಾ ವಿಷ್ಣುವಿನ ಮೊರೆಹೋಗಿ ತಮ್ಮನ್ನು ರಕ್ಷಿಸಲು ಬೇಡಿಕೊಂಡಾಗ ಮಹಾ ವಿಷ್ಣುವು ಬೇಟೆಗಾರನ ರೂಪದಲ್ಲಿ ಬಂದು ಅವರನ್ನು ರಕ್ಷಿಸಲಾಗಿ ಅವರು ಸ್ವಾಮಿಯನ್ನು ಅಲ್ಲೇ ನೆಲಸಿ ತಮ್ಮ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಪ್ರಾರ್ಥಿಸುತ್ತಾರೆ. ಅದಕ್ಕೆ ಮಹಾ ವಿಷ್ಣುವು ಕಲಿಯುಗದಲ್ಲಿ ಅಲ್ಲಿ ಬೇಟೆರಾಯನಾಗಿ ನೆಲಸುವುದಾಗಿಯೂ, ಅದುವರೆವಿಗೂ ಅಲ್ಲಿನ ಪಕ್ಷಿಮಡುವಿನಲ್ಲಿ ಜಲಧಿವಾಸ ಮಾಡುತ್ತಾ ನಿರೀಕ್ಷಿಸುವುದಾಗಿ ಅಭಯ ಕೊಡುತ್ತಾನೆ. ನಂತರ ಕಲಿಯುಗದಲ್ಲಿ ಸ್ಥಳ ವಾಸಿ ಚೌಡಯ್ಯನವರ ಸ್ವಪ್ನದಲ್ಲಿ ಪ್ರೇರಣೆಯಾಗಿ, ಅವರಿಂದ ಸ್ವಾಮಿಯ ವಿಗ್ರಹ ಪಕ್ಷಿಮಡುವಿನಿಂದ ಸ್ಥಳಾಂತರಗೊಂಡು ಈಗಿನ ಸ್ಥಳದಲ್ಲಿ ಪ್ರತಿಸ್ಥಾಪನೆಯಾಯಿತೆಂದು ಸ್ಥಳ ಪುರಾಣ ತಿಳಿಸುತ್ತದೆ. ನಂತರ ದೇವಸ್ಥಾನದ ನಿರ್ಮಾಣ ನಿರಾಯಾಸವಾಗಿ ನಡೆಯಿತು. ಸ್ವಾಮಿಯ ಪ್ರತಿಷ್ಠೆಯಾದ ನಂತರ, ನೈಋತ್ಯ ಮೂಲೆಯಲ್ಲಿ ಮಹಾಲಕ್ಷ್ಮಿಅಮ್ಮನವರ ಪ್ರತಿಷ್ಠೆ ಹಾಗು ದೇವಾಲಯ ನಿರ್ಮಾಣ ನೆರವೇರಿತೆಂದು ತಿಳಿದುಬರುತ್ತೆ. ಕಣ್ಮನ ತಣಿಸುವ ಬಹು ಸುಂದರ ದೇವಮೂರ್ತಿಗಳನ್ನು ಎಷ್ಟು ನೋಡಿದರೂ ಸಾಲದು. ಈಗ ದೇವಸ್ಥಾನ ಸರಕಾರದ ಮುಜರಾಯಿ ಇಲಾಖೆಯ ಉಸ್ತುವಾರಿಯಲ್ಲಿದೆ. ನಿತ್ಯ ಪೂಜಾ ಕಾರ್ಯ, ಉತ್ಸವ, ರಥೋತ್ಸವಗಳು ನಡೆಯುತ್ತವೆ.

12ನೆಯ ಶತಮಾನದ ಗಂಗಾಧರೇಶ್ವರ ದೇವಾಲಯ ಬೇಟೆರಾಯ ಸ್ವಾಮಿ ದೇವಾಲಯದಿಂದ ಕೆಲವೇ ಗಜಗಳ ದೂರದಲ್ಲಿದೆ. ದ್ರಾವಿಡ ಶೈಲಿಯ ಈ ಪುರಾತನ ದೇವಾಲಯದಲ್ಲಿ ಈಶ್ವರ ಲಿಂಗದ ಶಿರದಲ್ಲಿ ಗಂಗೆ ಜಪ ಸರ ಹಿಡಿದು ಜಪ ಮಾಡುತ್ತಿದ್ದಾಳೆ. ಮೇಲಿನ ಪ್ರಭಾವಳಿಯಿಂದ ನೀರು ಉಕ್ಕುತ್ತಿರುವಂತೆ ಕೆತ್ತನೆ ಮಾಡಲಾಗಿದೆ. ಪ್ರಭಾವಳಿಯ ಒಂದು ಬದಿಯಲ್ಲಿ ಸೂರ್ಯ, ಮತ್ತೊಂದು ಬದಿಯಲ್ಲಿ ಚಂದ್ರ ನೆಲೆಸಿದ್ದಾರೆ. ಲಿಂಗದ ನೆತ್ತಿಯ ಮೇಲೆ ಜಟೆಯ ಕೆತ್ತನೆ ಇದೆ. ಲಿಂಗದ ನೊಸಲಿನ ಭಾಗದಲ್ಲಿ 27 ನಕ್ಷತ್ರಗಳನ್ನು ಕೆತ್ತಲಾಗಿದೆ. ಬಹಳ ಅಪರೂಪದ ಲಿಂಗ ನಾನು ಮೊದಲ ಬಾರಿಗೆ ಕಂಡದ್ದು. ದೇವಾಲಯ ಉತ್ತರಾಭಿಮುಖವಾಗಿದೆ. ಲಿಂಗಾಭಿಷೇಕವಾದ ನೀರೆಲ್ಲಾ ಪಶ್ಚಿಮಾಭಿಮುಖವಾಗಿ ಕೆಳಗೆ ಹರಿದು ಬರುತ್ತೆ. ಕಂಚಿನ ಉತ್ಸವ ಮೂರ್ತಿ ಕೂಡ ಬಹಳ ಸುಂದರವಾಗಿದೆ. ಉತ್ಸವ ಮೂರ್ತಿಯ ಬಲ ಪಾದದ ಮೇಲೆ ಒಂದು ಕಣ್ಣಿದೆ. ಇದೂ ಸಹ ನಾನು ಕಂಡ ಬಹಳ ಅಪರೂಪದ ಮೂರ್ತಿ. ದೇವಾಲಯದ ದ್ವಾರದಲ್ಲಿ ಸುಂದರವಾದ 7 ಅಡಿ ಎತ್ತರದ ಬಸವಣ್ಣನನ್ನು (ನಂದಿ) ಕಡೆದು ಕೂರಿಸಲಾಗಿದೆ. ಇದರ ಮೇಲ್ಮೈ ನಮ್ಮ ಮುಖ ಕಾಣುವಷ್ಟು ನುಣುಪಾಗಿದೆ. ದೇವಾಲಯದ ಮತ್ತೊಂದು ಆಕರ್ಷಣೆ ಕಲ್ಲಿನ ದೊಡ್ಡ ಘಂಟೆ. ಇದರ ವ್ಯಾಸ 2 ಅಡಿ. ಘಂಟಾನಾದ ಮಧುರವಾಗಿದೆ. ಇದರ ಅಡಿಯಲ್ಲೇ ಬೇಡರ ಕಣ್ಣಪ್ಪ ಶಿವನಿಗೆ ಕಣ್ಣು ಅರ್ಪಿಸುತ್ತಿರುವ ಕೆತ್ತನೆ ಇದೆ. ದೇವಾಲಯ ದರ್ಶನ ಬಹಳ ಹಿತವಾದ, ಮುದ ನೀಡುತ್ತೆ.

ಮೂಲೆ ಶಂಕರೇಶ್ವರ ದೇವಾಲಯ
ಗಂಗಾಧರೇಶ್ವರ ದೇವಾಲಯದ ಎದುರಲ್ಲಿ ಅನತಿ ದೂರದಲ್ಲಿ ಮೂಲೆ ಶಂಕರೇಶ್ವರ ದೇವಾಲಯವಿದೆ. 12ನೇ ಶತಮಾನದ ಹೊಯ್ಸಳ ಶೈಲಿಯ ಅತಿ ಸುಂದರ ದೇವಾಲಯ. ತೆಂಗಿನ ತೋಟಗಳ ಸುಂದರ ಹಿನ್ನೆಲೆ ಹೊಂದಿರುವ ಅದ್ಭುತ ತಾಣ. ಪುರ್ವಾಭಿಮುಖವಾಗಿರುವ ಗರ್ಭ ಗುಡಿಗೆ, ನವರಂಗದ ಮೂಲಕ ಉತ್ತರಾಭಿಮುಖವಾಗಿ ಪ್ರವೇಶ. ನಕ್ಷತ್ರಾಕಾರದ ವೇದಿಕೆಯ ಮೇಲೆ ನಿರ್ಮಾಣ ಗೊಂಡಿರುವ ಅದ್ಭುತ ಕಲಾಕೃತಿ. ಇಲ್ಲಿನ ಕೆಲವು ಭಗ್ನಗೊಂಡ ವಿಗ್ರಹಗಳನ್ನು ಹಾಗೆಯೇ ರಕ್ಷಿಸಲಾಗಿದೆ. ಶಿವಲಿಂಗವಂತೂ ಅತಿ ಸುಂದರವಾಗಿದೆ. ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ನೆರವಿನಿಂದ ಶಿಥಿಲಗೊಂಡಿದ್ದ ಈ ದೇವಾಲಯವನ್ನು ಪುನರುಜ್ಜೀವನಗೊಳಿಸಲಾಗಿದೆ.

ಚೆನ್ನಕೇಶವ ದೇವಾಲಯ
ಗಂಗಾಧರೇಶ್ವರ ದೇವಾಲಯದ ಪಶ್ಚಿಮಕ್ಕೆ 500 ಅಡಿಗಳ ದೂರದಲ್ಲಿ ಶ್ರೀ ಚನ್ನಕೇಶವ ದೇವಾಲಯವಿದೆ. 12ನೇ ಶತಮಾನದ ಹೊಯ್ಸಳ ಶೈಲಿಯ ಸುಂದರ ದೇವಾಲಯ. ಚನ್ನಕೇಶವ ವಿಗ್ರಹ ಸುಮಾರು 6 ಅಡಿ ಎತ್ತರವಿದ್ದು ಬಹಳ ಸುಂದರವಾಗಿದೆ. ದೇವರು ಎದುರಲ್ಲೇ ನಿಂತ ಅನುಭವವಾಗುತ್ತೆ. ಎಲ್ಲ ಹೊಯ್ಸಳ ನಿರ್ಮಾಣದಂತೆ ಈ ದೇವಾಲಯವೂ ನಕ್ಷತ್ರಾಕಾರದ ವೇದಿಕೆಯ ಮೇಲೆ ಸುಂದರವಾಗಿ ನಿರ್ಮಾಣವಾಗಿದೆ.

ಈ ಮೂರೂ ದೇವಾಲಯಗಳನ್ನು ರಾಜ್ಯ ಪುರಾತತ್ವ ಇಲಾಖೆ ನೋಡಿಕೊಳ್ಳುತ್ತಿದೆ. ಹಾಗೆಂದು ದೇವಾಲಯಗಳ ಮುಂದೆ ಒಂದೊಂದು ನಾಮಪಲಕ ನೇತಾಡುತ್ತಿದೆ. ಪಟ್ಟಣದಲ್ಲಿರುವ ಸುರಭಿ-ಸಂಗಮ ಟ್ರಸ್ಟ್ ನಾಗರಿಕರ ಸಹಕಾರದಿಂದ ಈ ದೇವಾಲಯಗಳಲ್ಲಿ ದೈನಂದಿನ ಪೂಜಾ ಕಾರ್ಯಗಳಿಗೆ ನೆರವಾಗುತ್ತಿದೆ.

ಇದಲ್ಲದೆ, ಪಟ್ಟಣದಲ್ಲಿ, ಹನುಮಂತನ ಗುಡಿ, ಗಣಪತಿ ಗುಡಿ, ವುಡಿಸಲಮ್ಮನ ಗುಡಿ, ಮಾರಿ ಗುಡಿ ಮುಂತಾಗಿ ಅನೇಕ ಗುಡಿಗಳಿವೆ. ಅಲ್ಲಿರುವ ನನ್ನ ತಂಗಿಗೆ ನಾನು ಯಾವಾಗಲೂ ತಮಾಷೆ ಮಾಡುತ್ತಿದ್ದೆ. ನಿಮ್ಮ ಊರಿಗೆ ಪ್ರವೇಶ ಮಾಡುವಾಗ ಕೈ ಮುಗಿದು ಕೊಂಡು ಬಂದರೆ, ಪುನಃ ವಾಪಸು ಬರುವಾಗಲೇ ಬಿಡುಗಡೆ ಎಂದು. ಆ ಊರಿನಲ್ಲಿ ಒಂದು ನಾಣ್ನುಡಿ ಇದೆ. ಅದು ಹೀಗಿದೆ. ಅರಸು ಬೇಟೆರಾಯ, ವೈಭವದ ಗಂಗಪ್ಪ, ಪಾಪಿ ಚೆನ್ನಿಗರಾಯ, ದಿಕ್ಕಿಲ್ಲದ ಮೂಲೆ ಶಂಕರ. ಅಲ್ಲಿನ ದೇವಾಲಯಗಳ ಇಂದಿನ ಸ್ಥಿತಿ ನೋಡಿದರೆ ಈ ಮಾತು ನಿಜವೆನಿಸುತ್ತೆ!

No comments:

Post a Comment