Friday 19 April 2019

ಪ್ರಜಾಪ್ರಭುತ್ವ-ಚುನಾವಣೆ



ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಗಿದು ನಮ್ಮ ನೆಚ್ಚಿನ TV ಆಂಕರ್ ಗಳಿಂದ ಸ್ವಲ್ಪ ಮಟ್ಟಿನ ಬಿಡುವು ದೊರೆತು, ನಾವು ಇಷ್ಟು ನೆಮ್ಮದಿಯಾಗಿ ಇರಬಹುದಲ್ಲವೇ ಎಂಬ ಸೋಜಿಗ ಪೂರಿತ ಅಲ್ಪ ಸಮಾಧಾನ ದೊರೆಯುವ ಈ ಹೊತ್ತಿನಲ್ಲಿ , ನನಗೆ ಒಂದು ಸಂದೇಹ ಕಾಡಲು ಶುರುವಾಗಿದೆ . ಲೋಕಸಭಾ  ಚುನಾವಣೆಯ ಮೊದಲ ಹಂತದ ಕರ್ನಾಟಕದ ೧೪ ಸ್ಥಾನಗಳಿಗೆ    ಸ್ಪರ್ಧೆ ನಡೆಯಿತಾದರೂ , ಮಂಡ್ಯ ಒಂದರಲ್ಲೇ   ಚುನಾವಣೆ ನಡೆಯುತ್ತಿದೆಯೇನೋ ಎನಿಸುವಂತೆ ಈ ಪತ್ರಕರ್ತರು ಪ್ರಚಾರ ಕೊಟ್ಟದ್ದು, ದಿನದ ೨೪ ತಾಸು ಆ ಪ್ರಚಾರದ ಪ್ರಸಾರ ಮಾಡಿ ನಮ್ಮೆಲ್ಲರಿಗೂ ನಮ್ಮ ಸ್ವಂತ ಊರಿನಲ್ಲೂ ಚುನಾವಣೆ ನಡೆಯುತ್ತಿದೆಯೆಂಬ ಅರಿವನ್ನು ಮರೆಸಿದ್ದು ,ಅವರ  ಬುದ್ಧಿಶಕ್ತಿಯೋ , ಅವರ ಮಂಡ್ಯ ಪ್ರೇಮವೋ , ತೆರೆಮರೆಯ ಕೈಗಳೋ , ಅಥವಾ ಅವರ ಬೌದ್ಧಿಕ ದಿವಾಳಿತನವೋ ಎಂದು . ಅಂತೂ ಒಟ್ಟಿನಲ್ಲಿ ನಮ್ಮೆಲ್ಲರಿಗೂ  ಸುಮಾರು ಎರಡು ವಾರಗಳ ಕಾಲ ನಮ್ಮನೆಚ್ಚಿನ ಸಿನಿಮಾ ನಟರುಗಳ ,ರಾಜಕೀಯ ಧುರೀಣರ ,ಅವರ ಮಕ್ಕಳ , ಪ್ರಚಾರದ ಅಬ್ಬರ ,ಅವರ ಬೆಂಬಲಿಗರ ಓಡಾಟ, ಒಡನಾಟ ತೋರಿಸಿ, ಮಂಡ್ಯದ ಮೂಲೆ -ಮೂಲೆ ಕಾಣಿಸಿ  ಜನ್ಮ ಸಾಫಲ್ಯ ದೊರಕಿಸಿಕೊಟ್ಟರು . ಇದರಷ್ಟು ಪ್ರಚಾರ ಕರ್ನಾಟಕದ ಯಾವುದೇ ಸ್ಥಾನಕ್ಕೂ ದೊರೆತಿಲ್ಲವೆಂದು ನನ್ನ ಅನಿಸಿಕೆ . ಮಾಜಿ ಪ್ರಧಾನಿ ಗಳು ಸ್ಪರ್ದಿಸಿದ್ದ ತುಮಕೂರು ಕೂಡಾ ಇಷ್ಟು ಮಹತ್ವ ಗಳಿಸಲಿಲ್ಲ . ಈ ಪ್ರಚಾರದಲ್ಲಿ ಅನೇಕ ಪದ-ಪುಂಜ ಗಳ ಆವಿಷ್ಕಾರ ಆಗಿ ಕನ್ನಡ ಭಾಷೆ ಸ್ವಲ್ಪ ಶ್ರೀಮಂತ ವಾಯಿತೆನ್ನಬಹುದು . ಹೊಸ-ಹೊಸ ಬೈಗುಳ , ಪರಸ್ಪರ ಕೆಸರೆರಚಾಟ ,ವ್ಯಂಗ್ಯ , ಆರೋಪ-ಪ್ರತ್ಯಾರೋಪ ವ್ಯಕ್ತಿಗತ  ಠೀಕೆ -ಟಿಪ್ಪಣಿಗಳು , ಯೆಲ್ಲವೂ ಸೇರಿ ಲೋಕಸಭೆಯ ಉಮೇದುವಾರಿಕೆಯ ಘನತೆಗೆ ಕುಂದುಂಟಾಗುವಂತೆ ಆಯಿತೆನಿಸುತ್ತೆ . ಘನತೆ -ಗೌರವ ದಿಂದಲೂ ಮತಬೇಟೆ ಸಾಧ್ಯ ವೆಂಬುದು ನಮಗೆ ಗೊತ್ತಿಲ್ಲ . !!

ಪ್ರಜಾಪ್ರಭುತ್ವದಲ್ಲಿ ಟೀಕೆ , ಭಿನ್ನಾಭಿಪ್ರಾಯ ಸಹಜ . ಇದರಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಲು ಅವಕಾಶವಾಗುತ್ತೆ   ಆದರೆ  ಮಿಥ್ಯಾಪವಾದ , ಆಧಾರರಹಿತ ಆರೋಪ  ಬೆಳವಣಿಗೆಯನ್ನು ಕುಂಠಿತ ಗೊಳಿಸಬಹುದು. ನಿಂದನೆ ಯಾರಿಗೂ ಶೋಭೆ ತರುವುದಿಲ್ಲ . 

ಈ ಚುನಾವಣೆಯಲ್ಲೂ , ಯಥಾಪ್ರಕಾರ , ಮತಪಟ್ಟಿ ಲೋಪ ಹೆಚ್ಚಿನ ಸದ್ದು ಮಾಡುತ್ತಿದೆ. ಸ್ವಾತಂತ್ರ ದೊರೆತು ೭೨ ವರುಷ ವಾದರೂ ದೋಷವಿಲ್ಲದ, ಅರ್ಹರನ್ನೊಳಗೊಂಡ ಮತಪಟ್ಟಿ ತಯಾರಿಸುವಲ್ಲಿ ನಮ್ಮ ವೈಫಲ್ಯ  ನಾಚಿಕೆಗೇಡಿನ ಸಂಗತಿ. ಸರಕಾರಿ ಯಂತ್ರ ಇಷ್ಟು ಬೇಜವಾಬ್ದಾರಿ ಹಾಗು ನಾಲಾಯಕ್ ಎನಿಸುವುದಿಲ್ಲ . ಈ ಲೋಪ ಮುಂದುವರಿಸಿಕೊಂಡು ಬರುತ್ತಿರುವುದಕ್ಕೆ ಬೇರೇನೋ ಕಾರಣವಿರಬೇಕು . ಆದರೆ ಈ ಲೋಪ ನಮ್ಮೆಲ್ಲರಿಗೂ ನಾಚಿಕೆಗೇಡಿನ ಸಂಗತಿ . ಇಷ್ಟು ಮುಂದುವರೆದಿರುವ ಈ ಕಂಪ್ಯೂಟರ್ ಯುಗದಲ್ಲೂ ,ಮತದಾರ ಪಟ್ಟಿ ನಿಖರವಾಗಿ, ದೋಷರಹಿತವಾಗಿರಲು ಯಾಕೆ ಸಾಧ್ಯವಾಗುತ್ತಿಲ್ಲವೆಂದು ನನಗೆ ತಿಳಿಯದು . 

ಪ್ರಾಣಿಗಳ ವಿಮೆ ಮಾಡುವಾಗ , ಅವುಗಳ ಗುರುತಿಗಾಗಿ ಅವುಗಳ ಕಿವಿಗೆ ಒಂದು ನಿರ್ಧಿಷ್ಟ ನಂಬರ್ ಇರುವ ಓಲೆ ತೊಡಿಸುತ್ತಾರೆ .ಹಾಗೇ ನಮಗೂ ವೋಟು ಹಾಕಿದ್ದೇವೆನ್ನುವ ಗುರುತಿಗೆ ನಮ್ಮ ಕೈ ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಲಾಗುತ್ತೆ . !! ಈ ಶಾಯಿ ,ಬೂತ್ ನಲ್ಲಿ ಕುಳಿತಿರುವ ,ಸಂಭಂದಪಟ್ಟ ಅಧಿಕಾರಿಯ ಕಲಾ ಪ್ರಜ್ಞೆ ಯ ದ್ಯೋತಕ . ಅವರಿಗೆ ಖುಷಿ ಯಾಗುವಷ್ಟು ನಮ್ಮ ಬೆರಳಿನಮೇಲೆ ಚಿತ್ತಾರ ಮೂಡುತ್ತೆ . ಶಾಯಿ ಗುರುತು ಹಾಕಲು ಯಾವುದೇ ನಿರ್ಬಂಧವಿಲ್ಲ . ಆ ಅಧಿಕಾರಿಯ ಮೂಡ್ , ಸಮಯದ ಲಭ್ಯತೆ , ಜನಜಂಗುಳಿ ಮುಂತಾದವು ಈ ಚಿತ್ತಾರ ನಮ್ಮ ಬೆರಳಿನಮೇಲೆ ಹೇಗೆ ಮೂಡಿಬರಬೇಕೆಂಬುದನ್ನು ನಿರ್ಧರಿಸುತ್ತವೆ . ಚುನಾವಣೆ ಮುಗಿದ ತಿಂಗಳು,ಎರಡು ತಿಂಗಳವರೆಗೆ ಈ ಚಿತ್ತಾರದೊಂದಿಗೆ ನಾವು ಸಂಭ್ರಮಿಸಬಹುದು . !!

ಸುಮಾರು ಇಪ್ಪತ್ತು ದಿನದಿಂದ ಮುಫತ್ತಾಗಿ ಸಿಗುತ್ತಿದ್ದ ಮನರಂಜನೆ ಇಷ್ಟು ಬೇಗ ಮುಗಿದುಹೋಯಿತಲ್ಲ ಎಂದು ಒಮ್ಮೊಮ್ಮೆ ಬೇಸರವೆನಿಸುವುದೂ ಉಂಟು . ಆದರೇನಂತೆ ಉತ್ತರ ಕರ್ನಾಟಕದ ಚುನಾವಣಾ ನಾಟಕ ೨೩ ರಂದು ಮುಗಿದರೂ ,ಈ ಎಲ್ಲಾ ಪ್ರಕ್ರಿಯೆಗಳು ಮೇ ೨೩ ರಂದು ಕೊನೆಗೊಂಡು ಹೊಸ ಸರ್ಕಾರ ರಚನೆಯೊಂದಿಗೆ ಹೊಸತನ ಮೂಡುವ ಭರವಸೆ ಯೊಂದಿಗೆ ಸದಾಶಯಗಳೊಂದಿಗೆ ಅಲ್ಲಿಯವರೆಗೆ ಕಾಯುವ ಈ ಸಮಯ ಅಮೂಲ್ಯ .