Wednesday 14 January 2015

ಬೆಳವಾಡಿಯ ವೈಭವ

ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮಕ್ಕೆ ಭೇಟಿ ಕೊಡುವ ಅವಕಾಶ ಇತ್ತೀಚಿಗೆ ನನಗೆ ಒದಗಿ ಬಂತು. ಹಾಸನದಿಂದ ಹಗರೆ ಮಾರ್ಗ ಹಳೇಬೀಡಿಗೆ ಸೊಗಸಾದ ರಸ್ತೆ. ಹಳೇಬೀಡಿನಿಂದ ಕೇವಲ ೧೨ ಕಿಲೋಮೀಟರು ದೂರದಲ್ಲಿ ಬೆಳವಾಡಿ ಗ್ರಾಮವಿದೆ. ಹಳೇಬೀಡಿನಿಂದ ಬೆಳವಾಡಿ ರಸ್ತೆ ಈಗ ರಿಪೇರಿ ಮಾಡುತ್ತಿರುವುದರಿಂದ ಸ್ವಲ್ಪ ತ್ರಾಸಿನ ಪ್ರಯಾಣ. ಬೆಳವಾಡಿ ಒಂದು ಪುಟ್ಟ ಸುಂದರ ಗ್ರಾಮ. ಗ್ರಾಮ ತಲುಪಿದಾಗಲೇ ನಮ್ಮ ಪ್ರಯಾಣದ ಆಯಾಸವೆಲ್ಲ ಮಂಗಮಾಯ. ಅಷ್ಟೊಂದು ಚೇತೋಹಾರಿ ಅಲ್ಲಿನ ಪರಿಸರ. ಪರ್ವತ ಶ್ರೇಣಿಯ ತಪ್ಪಲಲ್ಲಿ, ನಳನಳಿಸುತ್ತಿರುವ ಅಡಕೆ, ತೆಂಗು, ಬಾಳೆಗಳ ನಡುವೆ ಕಂಗೊಳಿಸುತ್ತಿದೆ. ೬೦ ರಿಂದ ೭೫ ಕುಟುಂಬಗಳು ಅಲ್ಲಿರಬಹುದೆಂದು ನನ್ನ ಅಂದಾಜು. ಅಲ್ಲಿಯ ಪ್ರಶಾಂತತೆ, ವಾತಾವರಣ ಮೊದಲು ನಮ್ಮ ಮನ ಸೂರೆಗೊಳ್ಳುತ್ತವೆ. ಕೆರೆಯ ಶುಭ್ರ ನೀರಿನ ಮೇಲಿನ ತಂಗಾಳಿ ತಂಪೆರೆಯುತ್ತೆ. ಈ ಗ್ರಾಮವನ್ನು ಏಕಚಕ್ರನಗರವೆಂದು ಕರೆಯುತ್ತಿದ್ದರೆಂದು ತಿಳಿದು ಮಹಾಭಾರತದ ಬಕಾಸುರನ ಏಕಚಕ್ರವೇ ಇದಿರಬಹುದೇ ಎಂಬ ಅನುಮಾನ ನಮ್ಮನ್ನು ಕಾಡದೆ ಬಿಡದು!
ಬೆಳವಾಡಿ ವೀರ ನಾರಾಯಣ ದೇವಸ್ಥಾನ 
ನಮ್ಮ ಮೊದಲ ಗುರಿ ಇಲ್ಲಿನ ಉಧ್ಭವ ಗಣಪತಿಯ ದರ್ಶನ. ಸುಮಾರು ಮುನ್ನೂರು ವರ್ಷಗಳ ಇತಿಹಾಸವಿರುವ, ಹುತ್ತದ ಗಣಪತಿ ಎಂದೂ ಪ್ರಸಿದ್ದವಾಗಿರುವ ಸ್ವಯಂಭು ಗಣಪ ಭಕ್ತ ಜನರ ಪೊರೆಯುತ್ತ ಇಲ್ಲಿ ನೆಲೆಸಿದ್ದಾನೆ. ಅಂದಿನ ಗ್ರಾಮವಾಸಿ ಸೂರಪ್ಪಭಟ್ಟರ ಮನೆಯ ಒಂದು ಹಸು ಪ್ರತಿನಿತ್ಯ ಹಾಲು ಕರೆಯಲು ಬಿಡದೆ ಕೊಸರಾಡುತ್ತಿತ್ತು. ಇದರ ಮರ್ಮವನ್ನು ತಿಳಿಯಲು ಮೇಯಲು ಹಸುವನ್ನು ಬಿಟ್ಟು ಅದನ್ನು ಹಿಂಬಾಲಿಸಿ ನೋಡಲಾಗಿ, ಆ ಹಸುವು ಮನೆಗೆ ಹಿಂತಿರುಗುವ ವೇಳೆ, ಒಂದು ಹುತ್ತದ ಬಳಿಗೆ ತೆರಳಿ, ಹುತ್ತದ ಮೇಲೆ ಹಾಲು ಸುರಿಸುತ್ತಿದ್ದುದನ್ನು ಕಂಡು ಆಶ್ಚರ್ಯ ಚಕಿತರಾಗಿ ಬಂದು ರಾತ್ರಿ ಮಲಗಿರಲು, ಸ್ವಪ್ನದಲ್ಲಿ ಸ್ವಯಂ ಗಣಪ ಕಾಣಿಸಿ, ತಾನು ಅಲ್ಲಿ ನೆಲೆಸುವ ಪರಿ ತಿಳಿಸಿದಾಗ ರೋಮಾಂಚಿತರಾದ ಭಟ್ಟರು, ಸ್ವಾಮಿಗೆ ಒಂದು ಗುಡಿಯನ್ನು ಕಟ್ಟಿಸಿ, ಸ್ವಾಮಿಯ ಸೇವೆಗೆ ಅಣಿಯಾದರೆಂದು ಪ್ರತೀತಿ. ವಿಗ್ರಹ ದಿನದಿಂದ ದಿನಕ್ಕೆ ಬೆಳೆದು ಇಂದು ಸ್ಪಷ್ಟ ಆಕಾರ ಮೂಡಿದೆ. ಇನ್ನೂ ಬೆಳೆಯುತ್ತಲಿದೆಯೆಂಬ ನಂಬಿಕೆ ಭಕ್ತರದು. ಬೆಳವಣಿಗೆ ನಿಂತಾಗ ಕಲಿಯುಗದ ಕೊನೆಯೆಂದು ನಂಬಿಕೆ. ಶ್ರೀ ಶೃಂಗೇರಿ ಮಠದ ಉಸ್ತುವಾರಿಯಲ್ಲಿ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ದೇಶದ ಮೂಲೆ ಮೂಲೆಯಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಶ್ರೀ ಉದ್ಭವ ಗಣಪತಿ ದೇವಸ್ಥಾನ 
ಉಧ್ಭವ ಗಣಪತಿಯೇ ಇಲ್ಲಿನ ಮುಖ್ಯ ಆಕರ್ಷಣೆಯಲ್ಲ! ಹೊಯ್ಸಳ ದೊರೆ ವೀರಬಲ್ಲಾಳ ಹಾಗು ನರಸಿಂಹಬಲ್ಲಾಳರ ಕಾಲದಲ್ಲಿ (೧೨ನೇ ಶತಮಾನ) ಇಲ್ಲಿ ಅತ್ಯದ್ಭುತವಾಗಿ ದೇವಾಲಯ ಒಂದು ನಿರ್ಮಾಣಗೊಂಡಿದೆ. ಹೊಯ್ಸಳರ ಕಾಲದ ಶಿಲ್ಪ ಕಲಾ ವೈಭವದ ಎಲ್ಲ ಮಜಲೂ ಇಲ್ಲಿ ತೆರೆದುಕೊಂಡಿದೆ. ಬೇಲೂರು, ಹಳೇಬೀಡು ಅಪ್ರತಿಮ ಶಿಲ್ಪ ಕಲಾ ಸೌಂದರ್ಯಕ್ಕೆ ಹೆಸರಾಗಿದ್ದರೆ ಬೆಳವಾಡಿ ದೇವಾಲಯ ವಾಸ್ತು ಶಿಲ್ಪದಲ್ಲಿ ಅತ್ಯುಚ್ಚ ಸ್ಥಾನದಲ್ಲಿದೆ. ವೀರನಾರಾಯಣ(ವಿಷ್ಣು ) ಮೂರ್ತಿಯ ಕೆತ್ತನೆ ಅತ್ಯದ್ಭುತ. ಕಮಲದ ಮೇಲೆ ನಿಂತಿರುವ ೮ ಅಡಿ ಎತ್ತರದ ಭವ್ಯ ಮೂರ್ತಿ. ಮಾರ್ಚಿ ೧ರಂದು ಗರ್ಭ ಗುಡಿಯಿಂದ  ಸುಮಾರು ೧೦೦೦ ಅಡಿ ದೂರದ ಮುಖ್ಯ ದ್ವಾರದ ಮೂಲಕ ಸೂರ್ಯ ಕಿರಣ ದೇವಮೂರ್ತಿಯ ಮೇಲೆ ಬೀಳುವುದು ಅಂದಿನ ಸರಿ ಸಾಟಿಯಾಗದ ವಾಸ್ತು ಕೌಶಲ್ಯಕ್ಕೆ ಅತ್ಯದ್ಭುತ ಉದಾಹರಣೆ. ಭಿನ್ನ - ಭಿನ್ನವಾದ ಕೆತ್ತನೆಗಳ ೧೨೬ ಕಂಬಗಳು ದೇವಾಲಯದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಯಾರಿಗಾದರೂ ದೇವ ದರ್ಶನದಿಂದ ಜೀವನ ಪಾವನವೆನಿಸುವ ದೇವ ಪುತ್ತಳಿ ನೋಡಿದಷ್ಟೂ ನೋಡ ಬೇಕೆನ್ನಿಸುತ್ತದೆ. ಈ ದೇವಾಲಯ ಮೂರು ದೇವರುಗಳನ್ನೊಳಗೊಂಡ ಒಂದು ಅದ್ಭುತ ಸಂಕೀರ್ಣ. ಮೂರು ಶಿಖರಗಳನ್ನು ಒಳಗೊಂಡಿರುವುದರಿಂದ ಇದನ್ನು ತ್ರಿಕೂಟಾಚಲವೆಂದು ಕರೆಯುತ್ತಾರೆ ಕರ್ನಾಟಕದ ತ್ರಿಕೂಟಾಚಲಗಳಲ್ಲಿ ಈ ದೇವಾಲಯವೇ ಅತ್ಯಂತ ವಿಶಾಲವಾದುದು. ವೇಣುಗೋಪಾಲ, ಈ ದೇವಾಲಯದ ಉತ್ತರ ಭಾಗದಲ್ಲಿರುವ ದೈವ. ೭ ಅಡಿ ಎತ್ತರದ ಭವ್ಯ ಸುಂದರ ಮೂರ್ತಿ. ಪ್ರಾಚ್ಯವಸ್ತು ಇಲಾಖೆಯ ಮಾಹಿತಿಯ ಪ್ರಕಾರ ಭಾರತದಲ್ಲೇ ಅತ್ಯಂತ ಸುಂದರವಾದ ದೇವಮೂರ್ತಿ ಇದು. ದೇವಾಲಯದ ದಕ್ಷಿಣ ಭಾಗದಲ್ಲಿ, ವೇಣುಗೋಪಾಲನ ಎದುರಿನಲ್ಲಿ ಯೋಗಾನರಸಿಂಹ ನೆಲಸಿದ್ದಾನೆ. ಈ ದೇವಮೂರ್ತಿಯೂ ೭ ಅಡಿ ಎತ್ತರದ ಭವ್ಯ ಸುಂದರ ವಿಗ್ರಹ. ಹಿರಣ್ಯ ಕಶಿಪುವಿನ ವಧೆಯ ನಂತರ ತನ್ನ ಕೋಪ ಶಮನಕ್ಕಾಗಿ ನರಸಿಂಹ ಇಲ್ಲಿ ಯೋಗ ಮುದ್ರೆಯಲ್ಲಿ ನೆಲಸಿ ಭಕ್ತರ ಮನೋಭೀಷ್ಟಗಳನ್ನು ನೆರವೇರಿಸುತ್ತಿರುವ ಕರುಣಾಮಯಿ. ಒಟ್ಟಿನಲ್ಲಿ, ಈ ದೇವಾಲಯಗಳ ದರ್ಶನ ನಮ್ಮ ಪೂರ್ವ ಜನ್ಮದ ಸುಕೃತವೆನ್ನಬಹುದು.
ವೀರನಾರಾಯಣ ದೇವಾಲಯ ಬೆಳವಾಡಿ
ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳ ಮೇಲುಸ್ತುವಾರಿ ಶ್ರೀ ಶೃಂಗೇರಿ ಮಠದಿಂದ ನಡೆಯುತ್ತಿದ್ದು, ಕೈಂಕರ್ಯಗಳನ್ನು ಸಮರ್ಪಕವಾಗಿ ನೆರವೇರಿಸಲಾಗುತ್ತಿದೆ. ಇಷ್ಟೆಲ್ಲಾ ವೈಭವ ಈ ಗ್ರಾಮದಲ್ಲಿದ್ದರೂ, ಈ ಗ್ರಾಮ ಅನೇಕ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಕುಡಿಯುವ ನೀರಿನ ಕೊರತೆ, ವಿದ್ಯುತ್ ಸರಬರಾಜಿನ ಕೊರತೆ (ದಿನಕ್ಕೆ ೪ ಘಂಟೆ ಮಾತ್ರ ವಿದ್ಯುತ್ ಸರಬರಾಜಿರುವ ವಿಷಯ ತಿಳಿದು ಬಂತು), ವೈದ್ಯಕೀಯ ಸೌಲಭ್ಯಗಳ ಕೊರತೆ, ಸಾರಿಗೆ ವ್ಯವಸ್ಥೆಯ ಕೊರತೆ, ಮುಂತಾದ ಎದ್ದು ಕಾಣುವ ನ್ಯೂನತೆಗಳ ನಡುವೆ, ದೇವಾಲಯದ ಅಂಗಳವನ್ನು ಅತ್ಯಂತ ಶುಚಿ ಹಾಗೂ ಸುಂದರವಾಗಿ ಇಟ್ಟಿರುವುದು ಸಮಾಧಾನಕರ ಅಂಶ.

ಬೆಳವಾಡಿಯ ಶ್ರೀ ನಾಗರಾಜರಿಗೆ ನಮ್ಮ ಭೇಟಿಯನ್ನು ಮೊದಲೇ ತಿಳಿಸಿದ್ದರಿಂದ ಅವರ ಮನೆಯಲ್ಲಿ ನಮಗೆ ರುಚಿಕಟ್ಟಾದ ಊಟದ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿ ಮಾಡಿದ್ದರು. ಶ್ರೀ ರಾಮಣ್ಣನವರು ಸ್ಥಳ ಮಹಿಮೆ ಮತ್ತು ಗ್ರಾಮದ ವಿವಿಧ ಮಾಹಿತಿ ನೀಡಿದರು. ಬೆಳವಾಡಿಯ ಅವಿಸ್ಮರಣೀಯ ಭೇಟಿ ಮುಗಿಸಿ ಹಿಂತಿರುಗುವಾಗ ನಮ್ಮ ಜೀವನದ ಅತ್ಯಂತ ಸಾರ್ಥಕ ದಿನ ಇದೆಂದು ನಮಗೆಲ್ಲರಿಗೂ ಅನಿಸಿದ್ದು ಅತಿಶಯೋಕ್ತಿಯಲ್ಲ.

--
ನಂಜುಂಡಸ್ವಾಮಿ