Friday 31 May 2019

ನಮೋ - ನಮೋ

ಮೊನ್ನೆಯ ನ್ಯೂಸ್ ಐಟಂ ಒಂದನ್ನು ನೋಡಿ, ನನ್ನಲ್ಲೂ ಸ್ವಲ್ಪ ತಳಮಳ ಉಂಟಾಗಿದೆ. ಬಹುಷಃ ನೀವೆಲ್ಲರೂ ಈ ನ್ಯೂಸ್ ಐಟಂ ನೋಡಿಯೇ ಇರುತ್ತೀರಾ. ಲೋಕಸಭೆ ಚುನಾವಣೆ ಫಲಿತಾಂಶ ಬಂದಂದಿನಿಂದ ನಮ್ಮ ಪ್ರಸಿದ್ಧ ಮಾನ್ಯ ಲಾಲೂಜಿರವರಿಗೆ ಊಟ ಸೇರುತ್ತಿಲ್ಲವಂತೆ, ನಿದ್ರೆ ಬರುತ್ತಿಲ್ಲವಂತೆ. ಅವರ ಅರೋಗ್ಯ ನೋಡಿಕೊಳ್ಳುತ್ತಿರುವ ವೈದ್ಯರು ಅವರಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರಂತೆ. ಹೀಗೇ ಮುಂದುವರೆದರೆ ಅವರಿಗೆ ಕೊಡುತ್ತಿರುವ ಔಷಧಗಳಾವುವೂ  ಪರಿಣಾಮಕಾರಿಯಾಗದೆ ಪರಿಸ್ಥಿತಿ ಬಿಗಡಾಯಿಸಬಹುದೆಂದು. ಪಾಪ ಅವರ ಪಕ್ಷದ ಉಮೇದುವಾರರಾರೂ ಚುನಾವಣೆಯಲ್ಲಿ ಗೆಲ್ಲದೇ ಅವರಿಗೆ ಎಷ್ಟು ನೋವುಂಟು ಮಾಡಿದ್ದಾರೆಂದು ಆ ವೈದ್ಯರಿಗೆ ಹೇಗೆ  ತಾನೇ ಅರ್ಥವಾಗುತ್ತೆ? ಅವರೇನು ಈ ಚುನಾವಣೆಗಳ ಗೊಡವೆಗೆ ಹೋಗಿದ್ದರೆ?

ಸರಿ, ಇದಕ್ಕೂ ನನ್ನ ತಳಮಳಕ್ಕೂ ಏನಪ್ಪಾ ಸಂಬಂಧ? ಗೋಕುಲಾಷ್ಟಮಿಗೂ ಇಮಾಂ ಸಾಬರಿಗೂ...? ಎಂದು ನೀವೆಲ್ಲಾ ನನ್ನ ಮೇಲೆ ಮುಗಿಬೀಳುವಿರೆಂದು ನನಗೆ ಗೊತ್ತು. ಸ್ವಲ್ಪ ಸಮಾಧಾನವಿರಲಿ.

ಚುನಾವಣೆ ಫಲಿತಾಂಶ ಬಂದ ದಿನದಿಂದ ಖಂಡಿತವಾಗಿ ನೀವೆಲ್ಲರೂ ಒಂದು ಅತಿ ಮುಖ್ಯ ಬದಲಾವಣೆ ಗಮನಿಸಿರುತ್ತೀರ. ಆದರೆ ನನ್ನ ಹಾಗೆ ತಳಮಳವಾಗದಿರಬಹುದು. ಸುಮಾರು ಐದು ವರ್ಷಗಳಿಂದ ತಪ್ಪದೇ ರಾಹುಲ್ ಜಿ, ದೀದಿ ಜಿ, ದಿಗ್ಗಿ ಜಿ, ಬಹನ್ ಜಿ, ಗೌಡಾ ಜಿ, ನಾಯ್ಡು ಜಿ, ಲಾಲೂ ಜಿ, ಸಿದ್ದೂ ಜಿ, ಕುಮಾರಣ್ಣ ಮುಂತಾದ ಅನೇಕ 'ಜೀ' ಗಳು ಪ್ರಧಾನಮಂತ್ರಿ ಮೋದಿಯವರನ್ನು ಒಂದು ಕ್ಷಣವೂ ಬಿಡದೇ ಧ್ಯಾನಿಸುತ್ತಿದ್ದರು. ಎಷ್ಟು ಬಗೆಯ ಬಿರುದು-ಬಾವಲಿಗಳನ್ನು ಅವರಿಗೆ ಕೊಟ್ಟಿದ್ದರು. ಇದ್ದಕ್ಕಿದ್ದಹಾಗೆ ಇವೆಲ್ಲ ತಣ್ಣಗಾದರೆ ತಳಮಳವಲ್ಲದೆ ಏನಾಗಬೇಕು? ಬೈಗುಳ ಕೇಳಿ-ಕೇಳಿ ಅದೇ ಒಂದು ರೀತಿ ಜೋಗುಳದ ಹಾಗೆ ಅಭ್ಯಾಸವಾಗಿತ್ತು. ದೇವತೆಗಳಿಗೆ ಬೆಳದಿಂಗಳು ಅಮೃತದ ಹಾಗಂತೆ. ನನಗೂ (ಬಹುಷಃ ಮೋದಿ ಜಿ ರವರಿಗೂ) ಈ ಬೈಗುಳ, ಆಪಾದನೆ ಎಷ್ಟು ಅಭ್ಯಾಸವಾಗಿದೆಯೆಂದರೆ ಅವಿಲ್ಲದೆ ಊಟ ಸೇರುವುದಿಲ್ಲ, ನಿದ್ರೆ ಬರುವುದಿಲ್ಲ. ಯಾವ ಕೆಲಸದಲ್ಲೂ ಮನಸು ನಿಲ್ಲುತ್ತಿಲ್ಲ. ಯಾರೊಡನೆಯೂ ಮಾತು-ಕಥೆ ಬೇಕಿಲ್ಲ. ಒಂದು ರೀತಿಯ ವೈರಾಗ್ಯ ಭಾವ. ಇಂಥಾ ಬೈಗುಳಗಳಿಲ್ಲದೇ ಮುಂದೆ ಹೇಗಪ್ಪಾ ಬದುಕು ಸಾಗಿಸುವುದು ಎನಿಸಿಬಿಟ್ಟಿದೆ!!



ಇವರೆಲ್ಲರ ಈ ಬೈಗುಳಗಳನ್ನು ನಮಗೆಲ್ಲಾ ತಲುಪಿಸಲು ' ಪ್ರೆಸ್ಸ್ಟಿಟ್ಯೂಟ್ಸ್ ' ಗಳ ಪಾತ್ರ ಅತಿ ಮಹತ್ವವಾದುದು. ಅವರಿಲ್ಲದಿದ್ದರೆ ನಮ್ಮ ಬದುಕು ಶೂನ್ಯ, ಬರಡಾಗುತ್ತಿತ್ತು. ಪಾಪ ಬಹಳ ಮುತುವರ್ಜಿ ವಹಿಸಿ ಅತಿ ಸಾಮಾನ್ಯ ಪುಡಾರಿಯಿಂದ ಅತಿ ದೊಡ್ಡ ನೇತಾರರ ಬೈಗುಳಗಳನ್ನು ಅದೆಷ್ಟೇ ಕಷ್ಟವಾದರೂ ನಮಗೆ ಮುಟ್ಟಿಸಿ ನಮ್ಮನ್ನು ಕೃತಾರ್ಥರನ್ನಾಗಿಸಿದ್ದಾರೆ. ನಾವೆಲ್ಲರೂ ಅವರಿಗೆ ಚಿರಋಣಿಯಾಗಿರಬೇಕಾದ್ದು ನಮ್ಮೆಲ್ಲರ ಕರ್ತವ್ಯ.

ಬರೇ ಬೈಗುಳ ಕೇಳುವುದಲ್ಲದೇ, ಅವರ ಮುಖಭಾವ ನೋಡಿ ಅದನ್ನು ಅನುಭವಿಸಿದ ಸುಖವನ್ನು ಹೇಗೆ ವರ್ಣಿಸಲಿ?

೬ನೇ ಹಂತದ ಚುನಾವಣಾ ಪ್ರಚಾರ ಸಭೆಯಲ್ಲಿ ದೀದಿ ಜಿ ಸಭಿಕರನ್ನು ತಂದೆ-ತಾಯಿಯರೇ, ಅಕ್ಕ-ತಂಗಿಯರೇ, ಅಣ್ಣ-ತಮ್ಮಂದಿರೇ, ನೀವೆಲ್ಲರೂ ಮೋದಿಯವರನ್ನು ದೇಶ ಬಿಟ್ಟೇ ಓಡಿಸಿ ಎಂದು ಕೊಟ್ಟ ಕರೆ, ಅವರ ಮುಖ ಭಾವ, ಆಂಗಿಕ ಪ್ರದರ್ಶನ ಯಾರಾದರೂ ಮರೆಯಲುಂಟೇ? ಅವರ ಭಾಷಣ ಕೇಳಿದ ಯಾರಿಗಾದರೂ ಅವರು ಸೋಲಿನ ಹಾದಿಯಲ್ಲಿದ್ದು ಡೆಸ್ಪರೇಟ್ ಆಗಿದ್ದರೆನಿಸಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ನಮ್ಮ ರೇವಣ್ಣ, ಕುಮಾರಣ್ಣ, ಸಿದ್ದೂಜಿ, ಗೌಡಾಜಿ ಅಲ್ಲದೆ ಸಣ್ಣ-ಪುಟ್ಟ ಮಾಂಡಲೀಕರೂ ಕೂಡ ಮೋದಿಯವರನ್ನು ಹೀಯಾಳಿಸಿ, ಏಕವಚನದಲ್ಲಿ ಸಂಬೋಧಿಸಿದ್ದನ್ನು ಯಾರು ತಾನೇ ನಿರಂತರ ನೆನಪಿನಿಂದ ಅಳಿಸಿಹಾಕಲು ಸಾಧ್ಯ? ನಾನು ಯಾವ ಪಕ್ಷಕ್ಕೂ ಸೇರಿಲ್ಲ. ನಮ್ಮ ಪ್ರಧಾನಿಯವರನ್ನು ವಿನಾಕಾರಣ ನಿಂದಿಸಿದ್ದಕ್ಕೆ ನನ್ನ ತಕರಾರು. ಅವರ ಬಗ್ಗೆ ಏನಾದರೂ ಅಭಿಪ್ರಾಯ ಭೇದವಿದ್ದರೆ ಸಹ್ಯ ಮಾತುಗಳಲ್ಲೇ ತರ್ಕಬದ್ಧವಾಗಿ ಮಂಡಿಸಿ ಪ್ರಚುರಪಡಿಸಬಹುದಿತ್ತು. ಅದನ್ನು ಎಲ್ಲರೂ ಒಪ್ಪುತ್ತಿದ್ದರೇನೋ! ಹೀನ ಶಬ್ದಗಳಲ್ಲಿ ನಿಂದನೆ ಯಾರಿಗೂ ಶೋಭೆ ತರುವುದಿಲ್ಲ. ಒಟ್ಟಿನಲ್ಲಿ ಈ ನಿಂದನಾಪರ್ವ ಸತತ ೫ ವರ್ಷ ಮುಂದುವರೆದು ಈಗ ಸ್ತಬ್ದವಾಗುವ ಹಂತ ತಲಪಿರಬಹುದು.

ಇಂದಿನಿಂದ  ಹೊಸ ಪರ್ವ ಪ್ರಾರಂಭ. ನಿರೀಕ್ಷೆ ಬಹಳ ಇದೆ. ನೋಡೋಣ ಹೇಗಾಗುತ್ತೆ ಅಂತ. ಅದನ್ನೆದುರಿಸಲು ನಾವೆಲ್ಲರೂ ತಯಾರಾಗೋಣ.

Friday 19 April 2019

ಪ್ರಜಾಪ್ರಭುತ್ವ-ಚುನಾವಣೆ



ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಗಿದು ನಮ್ಮ ನೆಚ್ಚಿನ TV ಆಂಕರ್ ಗಳಿಂದ ಸ್ವಲ್ಪ ಮಟ್ಟಿನ ಬಿಡುವು ದೊರೆತು, ನಾವು ಇಷ್ಟು ನೆಮ್ಮದಿಯಾಗಿ ಇರಬಹುದಲ್ಲವೇ ಎಂಬ ಸೋಜಿಗ ಪೂರಿತ ಅಲ್ಪ ಸಮಾಧಾನ ದೊರೆಯುವ ಈ ಹೊತ್ತಿನಲ್ಲಿ , ನನಗೆ ಒಂದು ಸಂದೇಹ ಕಾಡಲು ಶುರುವಾಗಿದೆ . ಲೋಕಸಭಾ  ಚುನಾವಣೆಯ ಮೊದಲ ಹಂತದ ಕರ್ನಾಟಕದ ೧೪ ಸ್ಥಾನಗಳಿಗೆ    ಸ್ಪರ್ಧೆ ನಡೆಯಿತಾದರೂ , ಮಂಡ್ಯ ಒಂದರಲ್ಲೇ   ಚುನಾವಣೆ ನಡೆಯುತ್ತಿದೆಯೇನೋ ಎನಿಸುವಂತೆ ಈ ಪತ್ರಕರ್ತರು ಪ್ರಚಾರ ಕೊಟ್ಟದ್ದು, ದಿನದ ೨೪ ತಾಸು ಆ ಪ್ರಚಾರದ ಪ್ರಸಾರ ಮಾಡಿ ನಮ್ಮೆಲ್ಲರಿಗೂ ನಮ್ಮ ಸ್ವಂತ ಊರಿನಲ್ಲೂ ಚುನಾವಣೆ ನಡೆಯುತ್ತಿದೆಯೆಂಬ ಅರಿವನ್ನು ಮರೆಸಿದ್ದು ,ಅವರ  ಬುದ್ಧಿಶಕ್ತಿಯೋ , ಅವರ ಮಂಡ್ಯ ಪ್ರೇಮವೋ , ತೆರೆಮರೆಯ ಕೈಗಳೋ , ಅಥವಾ ಅವರ ಬೌದ್ಧಿಕ ದಿವಾಳಿತನವೋ ಎಂದು . ಅಂತೂ ಒಟ್ಟಿನಲ್ಲಿ ನಮ್ಮೆಲ್ಲರಿಗೂ  ಸುಮಾರು ಎರಡು ವಾರಗಳ ಕಾಲ ನಮ್ಮನೆಚ್ಚಿನ ಸಿನಿಮಾ ನಟರುಗಳ ,ರಾಜಕೀಯ ಧುರೀಣರ ,ಅವರ ಮಕ್ಕಳ , ಪ್ರಚಾರದ ಅಬ್ಬರ ,ಅವರ ಬೆಂಬಲಿಗರ ಓಡಾಟ, ಒಡನಾಟ ತೋರಿಸಿ, ಮಂಡ್ಯದ ಮೂಲೆ -ಮೂಲೆ ಕಾಣಿಸಿ  ಜನ್ಮ ಸಾಫಲ್ಯ ದೊರಕಿಸಿಕೊಟ್ಟರು . ಇದರಷ್ಟು ಪ್ರಚಾರ ಕರ್ನಾಟಕದ ಯಾವುದೇ ಸ್ಥಾನಕ್ಕೂ ದೊರೆತಿಲ್ಲವೆಂದು ನನ್ನ ಅನಿಸಿಕೆ . ಮಾಜಿ ಪ್ರಧಾನಿ ಗಳು ಸ್ಪರ್ದಿಸಿದ್ದ ತುಮಕೂರು ಕೂಡಾ ಇಷ್ಟು ಮಹತ್ವ ಗಳಿಸಲಿಲ್ಲ . ಈ ಪ್ರಚಾರದಲ್ಲಿ ಅನೇಕ ಪದ-ಪುಂಜ ಗಳ ಆವಿಷ್ಕಾರ ಆಗಿ ಕನ್ನಡ ಭಾಷೆ ಸ್ವಲ್ಪ ಶ್ರೀಮಂತ ವಾಯಿತೆನ್ನಬಹುದು . ಹೊಸ-ಹೊಸ ಬೈಗುಳ , ಪರಸ್ಪರ ಕೆಸರೆರಚಾಟ ,ವ್ಯಂಗ್ಯ , ಆರೋಪ-ಪ್ರತ್ಯಾರೋಪ ವ್ಯಕ್ತಿಗತ  ಠೀಕೆ -ಟಿಪ್ಪಣಿಗಳು , ಯೆಲ್ಲವೂ ಸೇರಿ ಲೋಕಸಭೆಯ ಉಮೇದುವಾರಿಕೆಯ ಘನತೆಗೆ ಕುಂದುಂಟಾಗುವಂತೆ ಆಯಿತೆನಿಸುತ್ತೆ . ಘನತೆ -ಗೌರವ ದಿಂದಲೂ ಮತಬೇಟೆ ಸಾಧ್ಯ ವೆಂಬುದು ನಮಗೆ ಗೊತ್ತಿಲ್ಲ . !!

ಪ್ರಜಾಪ್ರಭುತ್ವದಲ್ಲಿ ಟೀಕೆ , ಭಿನ್ನಾಭಿಪ್ರಾಯ ಸಹಜ . ಇದರಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಲು ಅವಕಾಶವಾಗುತ್ತೆ   ಆದರೆ  ಮಿಥ್ಯಾಪವಾದ , ಆಧಾರರಹಿತ ಆರೋಪ  ಬೆಳವಣಿಗೆಯನ್ನು ಕುಂಠಿತ ಗೊಳಿಸಬಹುದು. ನಿಂದನೆ ಯಾರಿಗೂ ಶೋಭೆ ತರುವುದಿಲ್ಲ . 

ಈ ಚುನಾವಣೆಯಲ್ಲೂ , ಯಥಾಪ್ರಕಾರ , ಮತಪಟ್ಟಿ ಲೋಪ ಹೆಚ್ಚಿನ ಸದ್ದು ಮಾಡುತ್ತಿದೆ. ಸ್ವಾತಂತ್ರ ದೊರೆತು ೭೨ ವರುಷ ವಾದರೂ ದೋಷವಿಲ್ಲದ, ಅರ್ಹರನ್ನೊಳಗೊಂಡ ಮತಪಟ್ಟಿ ತಯಾರಿಸುವಲ್ಲಿ ನಮ್ಮ ವೈಫಲ್ಯ  ನಾಚಿಕೆಗೇಡಿನ ಸಂಗತಿ. ಸರಕಾರಿ ಯಂತ್ರ ಇಷ್ಟು ಬೇಜವಾಬ್ದಾರಿ ಹಾಗು ನಾಲಾಯಕ್ ಎನಿಸುವುದಿಲ್ಲ . ಈ ಲೋಪ ಮುಂದುವರಿಸಿಕೊಂಡು ಬರುತ್ತಿರುವುದಕ್ಕೆ ಬೇರೇನೋ ಕಾರಣವಿರಬೇಕು . ಆದರೆ ಈ ಲೋಪ ನಮ್ಮೆಲ್ಲರಿಗೂ ನಾಚಿಕೆಗೇಡಿನ ಸಂಗತಿ . ಇಷ್ಟು ಮುಂದುವರೆದಿರುವ ಈ ಕಂಪ್ಯೂಟರ್ ಯುಗದಲ್ಲೂ ,ಮತದಾರ ಪಟ್ಟಿ ನಿಖರವಾಗಿ, ದೋಷರಹಿತವಾಗಿರಲು ಯಾಕೆ ಸಾಧ್ಯವಾಗುತ್ತಿಲ್ಲವೆಂದು ನನಗೆ ತಿಳಿಯದು . 

ಪ್ರಾಣಿಗಳ ವಿಮೆ ಮಾಡುವಾಗ , ಅವುಗಳ ಗುರುತಿಗಾಗಿ ಅವುಗಳ ಕಿವಿಗೆ ಒಂದು ನಿರ್ಧಿಷ್ಟ ನಂಬರ್ ಇರುವ ಓಲೆ ತೊಡಿಸುತ್ತಾರೆ .ಹಾಗೇ ನಮಗೂ ವೋಟು ಹಾಕಿದ್ದೇವೆನ್ನುವ ಗುರುತಿಗೆ ನಮ್ಮ ಕೈ ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಲಾಗುತ್ತೆ . !! ಈ ಶಾಯಿ ,ಬೂತ್ ನಲ್ಲಿ ಕುಳಿತಿರುವ ,ಸಂಭಂದಪಟ್ಟ ಅಧಿಕಾರಿಯ ಕಲಾ ಪ್ರಜ್ಞೆ ಯ ದ್ಯೋತಕ . ಅವರಿಗೆ ಖುಷಿ ಯಾಗುವಷ್ಟು ನಮ್ಮ ಬೆರಳಿನಮೇಲೆ ಚಿತ್ತಾರ ಮೂಡುತ್ತೆ . ಶಾಯಿ ಗುರುತು ಹಾಕಲು ಯಾವುದೇ ನಿರ್ಬಂಧವಿಲ್ಲ . ಆ ಅಧಿಕಾರಿಯ ಮೂಡ್ , ಸಮಯದ ಲಭ್ಯತೆ , ಜನಜಂಗುಳಿ ಮುಂತಾದವು ಈ ಚಿತ್ತಾರ ನಮ್ಮ ಬೆರಳಿನಮೇಲೆ ಹೇಗೆ ಮೂಡಿಬರಬೇಕೆಂಬುದನ್ನು ನಿರ್ಧರಿಸುತ್ತವೆ . ಚುನಾವಣೆ ಮುಗಿದ ತಿಂಗಳು,ಎರಡು ತಿಂಗಳವರೆಗೆ ಈ ಚಿತ್ತಾರದೊಂದಿಗೆ ನಾವು ಸಂಭ್ರಮಿಸಬಹುದು . !!

ಸುಮಾರು ಇಪ್ಪತ್ತು ದಿನದಿಂದ ಮುಫತ್ತಾಗಿ ಸಿಗುತ್ತಿದ್ದ ಮನರಂಜನೆ ಇಷ್ಟು ಬೇಗ ಮುಗಿದುಹೋಯಿತಲ್ಲ ಎಂದು ಒಮ್ಮೊಮ್ಮೆ ಬೇಸರವೆನಿಸುವುದೂ ಉಂಟು . ಆದರೇನಂತೆ ಉತ್ತರ ಕರ್ನಾಟಕದ ಚುನಾವಣಾ ನಾಟಕ ೨೩ ರಂದು ಮುಗಿದರೂ ,ಈ ಎಲ್ಲಾ ಪ್ರಕ್ರಿಯೆಗಳು ಮೇ ೨೩ ರಂದು ಕೊನೆಗೊಂಡು ಹೊಸ ಸರ್ಕಾರ ರಚನೆಯೊಂದಿಗೆ ಹೊಸತನ ಮೂಡುವ ಭರವಸೆ ಯೊಂದಿಗೆ ಸದಾಶಯಗಳೊಂದಿಗೆ ಅಲ್ಲಿಯವರೆಗೆ ಕಾಯುವ ಈ ಸಮಯ ಅಮೂಲ್ಯ .