Friday 9 June 2017

2017 ಇಂಗ್ಲೆಂಡ್ ಭೇಟಿ ಅನಿಸಿಕೆಗಳು


ಕಳೆದ ಮೂರು ತಿಂಗಳಲ್ಲಿ ಮೂರು ಹೃದಯ ವಿದ್ರಾವಕ ಘಟನೆಗಳು. ಮಾರ್ಚ್ ೨೨ ರಂದು ಲಂಡನ್ನಿನ ವೆಸ್ಟ್ ಮಿನಿಸ್ಟರಿನ ಸೇತುವೆಯ ಮೇಲೆ ಕೊಲ್ಲುವ ಉದ್ದೇಶದಿಂದ ಪಾದಚಾರಿ ಮಾರ್ಗದಲ್ಲಿ ಚಲಿಸುತ್ತಿದ್ದ ಅಮಾಯಕ ಪ್ರವಾಸಿಗಳ ಮೇಲೆ ಕಾರು ಚಲಾಯಿಸಿ ನಾಲ್ಕು ಜನಗಳ ಹತ್ಯೆ, ಐವತ್ತಕ್ಕೂ ಹೆಚ್ಚು ಜನಗಳಿಗೆ ತೀವ್ರ ಗಾಯ. ಮೇ ೨೨ ರಂದು ಮ್ಯಾಂಚೆಸ್ಟರ್ ನಲ್ಲಿ ಸಂಗೀತ ಸಂಜೆಯೊಂದರಲ್ಲಿ ಭಾಗವಹಿಸಿದ್ದ ಅನೇಕ ಮಕ್ಕಳು ಸೇರಿದಂತೆ ೨೨ ಹತ್ಯೆ. ನೂರಾರು ಗಾಯಾಳುಗಳು. ಜೂನ್ ೩ ರ ರಾತ್ರಿ ಲಂಡನ್ ನಲ್ಲಿ ೮ ಹತ್ಯೆ, ನೂರಾರು ಗಾಯಾಳುಗಳು. ಜೂನ್ ೬ ರಂದು ಪ್ಯಾರಿಸ್ ನ ಮುಖ್ಯ ಸ್ಥಳದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಧಾಳಿ ನಡೆಸುವ ಪ್ರಯತ್ನದಲ್ಲಿದ್ದ ಉಗ್ರ ನೊಬ್ಬನ ಹತ್ಯೆ. ಇದೆಲ್ಲಾ ನಮ್ಮನ್ನು ಬಹಳ ಕಾಡುವ, ಭವಿಷ್ಯ ಹೇಗೋ ಎಂದು ಯೋಚಿಸುವ ಹಾಗೆ ಮಾಡುತ್ತೆ. ಪ್ರಪಂಚ ಎತ್ತ ಸಾಗುತ್ತಿದೆ? ಭಯೋತ್ಪಾದನೆಯಿಂದ ಏನನ್ನು ಸಾಧಿಸಬಹುದು? ಅಮಾಯಕರ ಜೀವ ಇವರಿಗೆ ಏನೂ ಅಲ್ಲವೆ?

೨೦೦೫ರ ಉಗ್ರರ ಧಾಳಿಯ ನಂತರ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಅನೇಕ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಿ, ಆ ರೀತಿಯ ಧಾಳಿ ಮರುಕಳಿಸದಂತೆ ಬಹಳ ಎಚ್ಚರಿಕೆಯಿಂದ ಇದುವರೆವಿಗೂ ಲಂಡನ್ ನಿವಾಸಿಗಳ ಪ್ರಾಣ, ಆಸ್ತಿ ಹಾನಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹೊಸರೀತಿಯ ಧಾಳಿಗಳು ನಿಜಕ್ಕೂ ಆತಂಕಕಾರಿ.

ಬಡಪಾಯಿ ಸಾಮಾನ್ಯರು ಇಷ್ಟೆಲ್ಲಾ ಉಗ್ರರ ಅಟ್ಟಹಾಸದ ನಡುವೆಯೂ ಎದೆಗುಂದದೆ, ಅವರ ಅಬ್ಬರವನ್ನಡಗಿಸಲು ಧೈರ್ಯವಾಗಿ ಮುಂದೆಬಂದು ಪೊಲೀಸರಿಗೆ ಬೇಕಾದ ಸಹಾಯ ಒದಗಿಸುತ್ತಿದ್ದಾರೆ. ಪ್ರತ್ಯಕ್ಷ ಸಾಕ್ಷಿಗಳು ಪೂರ್ಣ ವಿವರ ಕೊಡುವುದರೊಂದಿಗೆ ನೆರವಾಗುತ್ತಿದ್ದಾರೆ. ಮಾನವೀಯ ಮುಖಗಳ ದೈವ ದರ್ಶನ ಕಾಣುತ್ತಿದ್ದೇವೆ. ಪರಸ್ಪರ ಸಹಕಾರದಿಂದ ನೊಂದ ಜೀವಿಗಳಿಗೆ ಬೇಕಾದ ನೆರವು ಒದಗಿಸುವಲ್ಲಿ ನಾಮುಂದು, ತಾಮುಂದೆಂದು ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಧಾವಿಸುತ್ತಿದ್ದಾರೆ. ಸಂಕಟದಲ್ಲಿ ಸಿಲುಕಿರುವವರಿಗೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಮನೆಗಳಲ್ಲಿ ತಂಗುವುದಕ್ಕೆ, ಊಟ ತಿಂಡಿಗೆ, ಪ್ರಯಾಣಕ್ಕೆ, ವೈದ್ಯಕೀಯ ಸೇವೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಮಾರ್ಚ್ ೨೨ರ ಧಾಳಿಯಲ್ಲಿ, ಅಮೇರಿಕದ ಜೋಡಿಯೊಂದು ೫೦ನೇ  ವಿವಾಹ ವಾರ್ಷಿಕೋತ್ಸವದ ನೆನಪಿಗಾಗಿ ಲಂಡನ್ ಪ್ರವಾಸ ಕೈಗೊಂಡು ಧಾಳಿಗೆ ಸಿಲುಕಿ ನಲುಗಿದ ದೃಶ್ಯ ಹೃದಯ ವಿದ್ರಾವಕ. ಅದೇ ಧಾಳಿಯಲ್ಲಿ, ಬ್ರಿಟಿಷ್ ಪಾರ್ಲಿಮೆಂಟ್ ಗೆ ಮುನ್ನುಗ್ಗಲು ಪ್ರಯತ್ನ ಪಟ್ಟ ಉಗ್ರನನ್ನು ಹಿಮ್ಮೆಟ್ಟಿಸಲು ಪ್ರಯತ್ನ ಪಟ್ಟು ಯಶಸ್ವಿಯಾದ ಪೊಲೀಸ್ ಅಧಿಕಾರಿಯೊಬ್ಬರು ಧಾಳಿಯಿಂದ ಮೃತ ಪಟ್ಟದ್ದಂತೂ ಅತ್ಯಂತ ದಾರುಣ ಹಾಗೂ ವಿಷಾದನೀಯ. ಇಡೀ ದೇಶದ ಜನತೆ ಅವರಿಗೆ ಸಲ್ಲಿಸಿದ ಗೌರವ, ಪ್ರಕಟಿಸಿದ ದುಃಖ ಮನಕಲಕುವಂತದ್ದು. ಸಂಸತ್ತಿನಲ್ಲಿ ಈ ಘಟನೆಯ ಚರ್ಚೆ ಅತ್ಯುನ್ನತ ಮಟ್ಟದಲ್ಲಿದ್ದು, ಮಾರ್ಗದರ್ಶಕವಾಗಿತ್ತು. ಆ ಘನತೆ, ಗಂಭೀರತೆ, ವಿಷಯ ಮಂಡನೆ, ಅವರ ಸಹಜ ದುಃಖ ದುಮ್ಮಾನ ನೋವು ಅಸಹಾಯಕತೆಗಳ ಪ್ರದರ್ಶನ, ಯಾರಿಗೂ ಅನುಕರಣೀಯ. ಪಕ್ಷ ಭೇದವಿಲ್ಲದೆ ಸರಕಾರದ, ಪೊಲೀಸ್ ಅಧಿಕಾರಿಗಳ, ಆಂಬುಲೆನ್ಸ್ ಹಾಗೂ ಇತರ ವೈದ್ಯಕೀಯ ಸೇವೆಗಳ ಬೆಂಬಲಕ್ಕೆ, ಪ್ರಶಂಸೆಗೆ ಕೊರತೆ ಇಲ್ಲವೇ ಇಲ್ಲ. ಘಟನೆ ನಡೆದ ೩ ನಿಮಿಷದಲ್ಲಿ ಆ ಸ್ಥಳದಲ್ಲಿ ಆಂಬುಲೆನ್ಸ್ ಸಿದ್ದವಿತ್ತೆಂದರೆ ಇವರ ಕಾರ್ಯಕ್ಷಮತೆ ಎಷ್ಟರಮಟ್ಟಿಗೆ ಇದೆ ಎಂಬುವುದನ್ನು ಊಹಿಸಬಹುದು. ಪೊಲೀಸರಿಗೆ ಕರೆಹೋದ ೮ ನಿಮಿಷದಲ್ಲಿ ಜೂನ್ ೩ರ ಘಟನೆಯಲ್ಲಿ ಉಗ್ರರ ಹತ್ಯೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಮೂರೂ ಧಾಳಿಕೋರರು ಪೊಲೀಸರಿಂದ ಕೊಲ್ಲಲ್ಪಟ್ಟರು.  ಮಾರ್ಚ್ ೨೨ರ ಘಟನೆ ನಡೆದ ೭-೮ ನಿಮಿಷದಲ್ಲಿ ಉಗ್ರ ಧಾಳಿಕೋರನ ಹತ್ಯೆ ಮಾಡುವಲ್ಲಿ ಪೋಲಿಸರು ಯಶಸ್ವಿಯಾಗಿದ್ದರು. ಈ ಬಗ್ಗೆ ಅನಗತ್ಯ ಚರ್ಚೆಗಳಾಗಲಿ, ಟಿವಿ ಸಂವಾದಗಳಾಗಲಿ ಏನೂ ನಡೆಯಲಿಲ್ಲ! ಸಾವಿರಾರು ಸಂಖ್ಯೆ ನಾಗರಿಕರು, ಅಧಿಕಾರಿಗಳು, ರಾಜಕಾರಣಿಗಳು ತುಂಬಾ ಘನತೆ, ಗೌರವ ಪೂರಕವಾಗಿ ಸಂತಾಪ ಸೂಚಿಸಿ ಪುಷ್ಪ ಗುಚ್ಛ ಅರ್ಪಿಸಿದರು. ಬೆಳಗಾಗುವುದರಲ್ಲಿ ತಮ್ಮ ದುಃಖ ಸಂಕಟಗಳನ್ನು ಬದಿಗೊತ್ತಿ ತಮ್ಮ-ತಮ್ಮ ಕೆಲಸ-ಕಾರ್ಯಗಳಿಗೆ ಹಾಜರಾದರು. ಯಾರ ಮೇಲೂ ದೋಷಾರೋಪಣೆ ಕಂಡುಬರಲಿಲ್ಲ . ಸಂಸದ್ಭವನದ ರಕ್ಷಣೆಯಲ್ಲಿ ಪ್ರಾಣ ನೀಗಿದ ಅಧಿಕಾರಿಯ ಬಗ್ಗೆ ಮಾತನಾಡುವಾಗ ಅನೇಕ ಸಂಸದರು ಅತ್ತೇಬಿಟ್ಟರು. ಎಲ್ಲೂ ಕೃತ್ರಿಮತೆ ಗೋಚರಿಸುವುದಿಲ್ಲ.

ಮ್ಯಾಂಚೆಸ್ಟರ್ ನಲ್ಲಿ ಉಗ್ರಗಾಮಿಯೊಬ್ಬ ತನ್ನ ಶರೀರಕ್ಕೆ ಕಟ್ಟಿಕೊಂಡ ಬಾಂಬ್ ಸ್ಪೋಟಗೊಳಿಸಿ ಸಂಗೀತಸಂಜೆಯಲ್ಲಿ ಪಾಲ್ಗೊಂಡಿದ್ದ ಹದಿಹರೆಯದ ಮಕ್ಕಳು ಹಾಗು ಅವರನ್ನು ಕರೆದೊಯ್ಯಲು ಬಂದಿದ್ದ ಪೋಷಕರ ಹತ್ಯೆ ನಡೆಸಿ ಮಾನವಕುಲಕ್ಕೇ ಅಪಚಾರವೆಸಗಿದ. ಅಂದಿನ ಅಲ್ಲಿನ ಗಾಯಕಿ 23 ವಯಸ್ಸಿನ  ಅರಿಯಾನಾ ಗ್ರಾಂಡೆ, ಅಮೇರಿಕಾದ ಪ್ರಸಿದ್ಧ ಗಾಯಕಿ ಹಾಗೂ ನಟಿ. ೨೨ ಹತ್ಯೆ ಹಾಗು ೧೨೦ ಗಾಯಾಳುಗಳನ್ನು ಕಂಡ ಗ್ರಾಂಡೆ, ಈ ಸಂಕಷ್ಟದಲ್ಲಿ ಸಿಲುಕಿದ ಎಲ್ಲರ ಸಹಾಯಾರ್ಥವಾಗಿ ಕಳೆದ ಜೂನ್ ೪ರಂದು ಅದೇ ಮ್ಯಾಂಚೆಸ್ಟರ್ ನಲ್ಲಿ ಸಹಾಯಾರ್ಥ ಕಾರ್ಯಕ್ರಮ ನೀಡಿ ಮಾನವತಾವಾದವನ್ನು ಮೆರೆದ ಘಟನೆಯನ್ನು ಯಾರು ತಾನೇ ಮರೆಯಲು ಸಾಧ್ಯ ಈ ಕಾರ್ಯಕ್ರಮಕ್ಕೆ ಮ್ಯಾಂಚೆಸ್ಟರ್ ಸ್ಟೇಡಿಯಂ ತುಂಬಿ ತುಳುಕಿತ್ತೆಂದರೆ ಅದರ ಯಶಸ್ಸು ಎಲ್ಲ ನಾಗರಿಕರಿಗೆ ಸಲ್ಲಬೇಕು. ಜನಸಾಗರವನ್ನು ತನ್ನ ಹಾಗೂ ತನ್ನ ಸಹಗಾಯಕರ ಗಾಯನದಿಂದ  ಬೇರೆಯದೇ ಲೋಕಕ್ಕೆ ಕೊಂಡೊಯ್ದ ಗ್ರಾಂಡೆ, ಅತ್ಯಂತ ಭಾವುಕಳಾಗಿ ಕೆಲವು ಗೀತೆಗಳನ್ನು ಹಾಡಿ, ಶ್ರೋತೃಗಳಲ್ಲಿ ಕಣ್ಣೇರು ಹರಿಸಿದ್ದನ್ನು ಮರೆಯಲಾಗುವುದಿಲ್ಲ. 

ಇಂದು ಜೂನ್ ೮, ಬ್ರಿಟಿಷ್ ಪಾರ್ಲಿಮೆಂಟ್ ಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಇಂತಹ ಘೋರ ಪರಿಸ್ಥಿತಿಯಲ್ಲೂ ಯಾರಿಂದಲೂ ಚುನಾವಣೆ ಮುಂದೂಡುವಂತೆ ಬೇಡಿಕೆಯಾಗಲಿ, ಒತ್ತಾಯವಾಗಲೀ ಬರಲಿಲ್ಲ. ಅತ್ಯಂತ ಶಾಂತ ರೀತಿಯಿಂದ ಚುನಾವಣೆ ನಡೆಯುತ್ತಿದೆ. ಇದಕ್ಕಾಗಿ ಯಾವುದೇ ರಜಾ ಘೋಷಿಸಿಲ್ಲ. ಬೆಳಗಿನ ೭ ರಿಂದ  ರಾತ್ರಿ ೧೦ರ ವರೆಗೆ ವೋಟಿಂಗ್. ಅವರವರಿಗೆ ಅನುಕೂಲವಾದಾಗ ವೋಟ್ ಹಾಕಬಹುದು. ಪೋಲಿಂಗ್ ಬೂತ್ ಗಳ ಮುಂದೆ ಯಾವುದೇ ಜನಜಂಗುಳಿಯಾಗಲೀ, ಗಲಾಟೆಗಳಾಗಲೀ, ಚುನಾವಣಾ ಪ್ರಚಾರವಾಗಲೀ ಇಲ್ಲವೇಇಲ್ಲ. ಪೊಲೀಸರನ್ನಂತೂ ಎಲ್ಲೂ ಕಂಡಿಲ್ಲ. ಬ್ರಿಟಿಷರ ಶಿಸ್ತು, ಸಂಯಮಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಡ.

ಬಹುಷಃ ದುಷ್ಟಶಕ್ತಿಗಳು ಒಂದಾದಾಗ, ಅವರಿಂದ ಮಾನವಕುಲಕ್ಕೆ ಕೇಡು ಸಂಭವಿಸುವಾಗ, ದೈವ ಸಹಾಯ ದೊರಕಿ ಎಲ್ಲ ಶಕ್ತಿಗಳ ಒಗ್ಗೂಡುವಿಕೆಯಿಂದ ಕೇಡಿನ ನಿವಾರಣೆಯ ಪ್ರಯತ್ನ ನಡೆಯಬಹುದೇನೋ?