Friday 30 September 2011

ಮೋಜಿನ ದಿನಗಳು

ರಜೆಯಲ್ಲಿ ಹಳೆಬೀಡಿನ ಹತ್ತಿರ ಇರುವ ಘಟ್ಟದಹಳ್ಳಿಗೆ ಹೋಗುತ್ತಿದ್ದೆವು. ಅಲ್ಲಿ ನಮ್ಮ ದೊಡ್ಡಮ್ಮ (ತಾಯಿಯ ಅಕ್ಕ) ಇದ್ದರು. ನಮ್ಮನ್ನು ಕಂಡರೆ ಅವರ ಮಕ್ಕಳಷ್ಟೇ ಅಕ್ಕರೆ. ಹಳೇಬೀಡಿನಿಂದ ಘಟ್ಟದಹಳ್ಳಿಗೆ ಬಸ್ಸುಗಳು ಇರಲಿಲ್ಲ. ಸುಮಾರು ೫ ಕಿ.ಮಿ. ದೂರ. ಚಿಕ್ಕಮಕ್ಕಳು, ಹೆಂಗಸರು ಇದ್ದರೆ ನಮ್ಮ ದೊಡ್ಡಪ್ಪ ಎತ್ತಿನಗಾಡಿ ಕಳುಹಿಸುತ್ತಿದ್ದರು. ನಾವೇ ಒಂದಿಬ್ಬರಾದರೆ ನಡೆದೇ ಹೋಗುತ್ತಿದ್ದೆವು. ಸಕಲೇಶಪುರದಿಂದ ಬೇಲೂರು ಮೂಲಕ ಹಳೇಬೀಡು ತಲಪುತ್ತಿದ್ದೆವು. ಆಗೆಲ್ಲ ಬಸ್ಸುಗಳು ಕಡಿಮೆ ಹಾಗು ಖಾಸಗಿಯವು. ಸಕಲೇಶಪುರದಿಂದ ಬೇಲೂರಿಗೆ ೨೨ ಕಿ.ಮಿ. ಇಷ್ಟು ದೂರಕ್ಕೆ ೨ ತಾಸು ಆಗುತ್ತಿತ್ತು. ಬೇಲೂರಿನಲ್ಲಿ ಇಳಿದು ಚೆನ್ನಕೇಶವ ದೇವಾಲಯವನ್ನು ಒಮ್ಮೆ ಸುತ್ತು ಹಾಕಿದ ಷ್ಟೊ ಸಮಯದ ನಂತರ ಹಳೇಬೀಡಿಗೆ ಬಸ್ಸು ಸಿಗುತ್ತಿತ್ತು. ಬೇಲೂರಿನಿಂದ ಹಳೇಬೀಡಿಗೆ ೧೫ ಕಿ.ಮಿ. ಮತ್ತೆ ಒಂದು ಘಂಟೆ ಪಯಣ. ಹಳೇಬೀಡಿನಲ್ಲಿ ದೇವಸ್ಥಾನದ ಮುಂದಿನಿಂದಲೇ ಹೋಗಬೇಕಿತ್ತು. ಹಾಗಾಗಿ ಅಲ್ಲೂ ದೇವಾಲಯ ದರ್ಶನ ಆಗುತ್ತಿತ್ತು. ಆಗೆಲ್ಲಾ ಬಹಳಷ್ಟು ಬಾರಿ ದೇವಾಲಯಗಳಿಗೆ ಹೋಗುತ್ತಿದ್ದುದರಿಂದ ನಮಗೆ ಅವುಗಳ ಮಹತ್ವವೇ ತಿಳಿಯುತ್ತಿರಲಿಲ್ಲ. ಇದನ್ನು ನೋಡಲು ಇಷ್ಟು ಜನಗಳು ಬರುತ್ತಾರಲ್ಲ ಎಂದು ನಮಗೆ ಆಶ್ಚರ್ಯವಾಗುತ್ತಿತ್ತು. ಆಗ ಸಂದರ್ಶಕರು ಹೆಚ್ಚಾಗಿ ಇರುತ್ತಿರಲಿಲ್ಲ, ಬರುತ್ತಿದ್ದವರಲ್ಲಿ ಹೊರದೇಶೀಯರೇ ಹೆಚ್ಚು.

ಹಳೇಬೀಡು ಗಣೇಶ
ಹಳೇಬೀಡಿಗೆ ದ್ವಾರಸಮುದ್ರ ಎಂಬ ಹೆಸರು ಇದೆ. ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ಅಲ್ಲಿ ಒಂದು ಕೆರೆಯ ನಿರ್ಮಾಣವಾಗಿದೆ. ಇದು ದೇವಾಲಯದ ಸಮೀಪದಲ್ಲೇ ಇದೆ. ಸಾಕಷ್ಟು ವಿಸ್ತೀರ್ಣವುಳ್ಳ ದೊಡ್ಡ ಕೆರೆಯೇ ಹೌದು. ನಾವು ಈ ಕೆರೆ ಏರಿಯ ಮೇಲೆ ಹೋಗಬೇಕಾಗಿತ್ತು. ಕೆರೆ ಏರಿ ೧.೫ ಕಿ.ಮಿ. ಇದೆ. ನೀರು ತುಂಬಿರುವಾಗ ಈ ಕೆರೆ ಸಮುದ್ರವೇ ಸರಿ. ಕೆರೆಯ ಹಿಂಬಾಗದಲ್ಲಿ ಫಲವತ್ತಾದ ತೆಂಗಿನ ತೋಟವಿತ್ತು. ದೃಶ್ಯ ನೋಡಲು ಬಹಳ ಸೊಗಸಾಗಿರುತಿತ್ತು. ಏರಿ ದಾಟಿದಮೇಲೆ ೩ಕಿ.ಮಿ. ಪ್ರಯಾಣ ಒಣ ಬೋರೆಯ ಮೇಲೆ ಹೊಲಗಳ ನಡುವೆ ನಡೆದು ಸಾಗಬೇಕಾಗಿತ್ತು. ಊರು ತಲಪುವಷ್ಟರಲ್ಲಿ ಸುಸ್ತಾಗಿರುತ್ತಿತ್ತು. ಸಂಜೆಯೂ ಆಗಿರುತ್ತಿತ್ತು. ದೊಡ್ಡಮ್ಮ ಬಿಸಿ ಅಡಿಗೆ ಮಾಡಿ ಬಡಿಸುತ್ತಿದ್ದರು ತಿಂದು ಮಲಗಿದರೆ ಬೆಳಗ್ಗೆಯೇ ಎಚ್ಚರವಾಗುತ್ತಿತ್ತು. ಘಟ್ಟದಹಳ್ಳಿ ೧೫-೨೦ ಮನೆಗಳ ಸಣ್ಣ ಹಳ್ಳಿ. ಆಗ ಅಲ್ಲಿಗೆ ವಿದ್ಯುತ್ಚಕ್ತಿ ಇನ್ನು ಬಂದಿರಲಿಲ್ಲ. ಸಂಜೆಯಾಗುತ್ತಿದ್ದಂತೆ ಊರು ಕತ್ತಲಲ್ಲಿ ಮುಳುಗಿ ಬಿಕೋ ಎನ್ನುತ್ತಿತ್ತು. ರಜದಲ್ಲಿ 5-6 ದಿನ ಅಲ್ಲಿರುತ್ತಿದ್ದೆವು. ಅಷ್ಟು ದಿನವೂ ಸಂಜೆ ೭ರೊಳಗೆ ಊಟ ಮಾಡಿ ದೊಡ್ಡಮ್ಮನಿಂದ ಕಥೆಗಳನ್ನು ಕೇಳುತ್ತ ಮಲಗುತ್ತಿದ್ದೆವು. ಬೆಳಗ್ಗೆ ಸೂರ್ಯೋದಯಕ್ಕೆ ಮೊದಲೇ ನಮ್ಮನ್ನು ಎಬ್ಬಿಸಿ ಊರಮುಂದೆ ಹೋಗಿಬನ್ನಿ ಎನ್ನುತ್ತಿದ್ದರು. ಮೊದ-ಮೊದಲು ನಮಗೆ ಏನೆಂದೇ ಅರ್ಥವಾಗುತ್ತಿರಲಿಲ್ಲ. ನಮ್ಮ ದೊಡ್ಡಮ್ಮನ ಮಕ್ಕಳನ್ನು ವಿಚಾರಿಸಿದಾಗ ತಿಳಿಯಿತು. ಊರಿನಲ್ಲಿ ಯಾರ ಮನೆಯಲ್ಲೂ ಶೌಚಗೃಹ (toilet) ಇರಲಿಲ್ಲ. ಆ ಕೆಲಸಕ್ಕೆ ನಸುಕಲ್ಲೇ ಎದ್ದು ಊರ ಮುಂದಿನ ಕೆರೆ ಅಥವಾ ತೋಟಕ್ಕೆ ಹೋಗಬೇಕಾಗಿತ್ತು. ಪ್ರಾರಂಭದಲ್ಲಿ ಮುಜುಗರವಾಗಿ ೨-೩ ದಿನಕ್ಕೆ ವಾಪಸು ಊರಿಗೆ ಮರಳಿದ್ದಿದೆ! ಹಳ್ಳಿಯಲ್ಲಿ ಕೆರೆಯ ಆಸರೆಯಿಂದ ಭತ್ತ, ಕಬ್ಬು, ಧಾನ್ಯಗಳು, ಹುರುಳಿ, ಅವರೇ ಮುಂತಾದ ಅನೇಕ ಬೆಳೆಗಳನ್ನು ಬೆಳೆಯುತ್ತಿದ್ದರು. ನಮ್ಮ ದೊಡ್ದಪ್ಪನವರಿಗೂ ತೆಂಗಿನ ತೋಟ, ತರಿ ಜಮೀನು, ಹೊಲ ಇದ್ದವು. ನಮ್ಮ ದೊಡ್ಡಪ್ಪ ಅವರ ಮೂರು ತಮ್ಮಂದಿರೊಂದಿಗೆ ಒಟ್ಟಿಗೆ ಇದ್ದರು. ತಮ್ಮಂದಿರಿಗೆ ಮದುವೆ ಆಗಿರಲಿಲ್ಲ. ಅವರೆಲ್ಲರೂ ಒಟ್ಟಾಗಿ ವ್ಯವಸಾಯ ಕೆಲಸಗಳನ್ನು ಮಾಡುತ್ತಿದ್ದರು. ಅವರೆಲ್ಲರಿಗೂ ನಮ್ಮನ್ನು ಕಂಡರೆ ಬಹಳ ಅಕ್ಕರೆ, ಸಂತೋಷ. ನನ್ನನ್ನು ಎತ್ತಿಕೊಂಡೇ ತೋಟ, ಆಲೆಮನೆ, ಹೊಲ ದೇವಸ್ಥಾನ ಮುಂತಾದ ಸ್ಥಳಗಳಿಗೆ ಹೊತ್ತೊಯ್ಯುತ್ತಿದ್ದರು. ನನಗೆ ಸಂಕೋಚ, ಅವರಿಗೆ ಸಂತೋಷ! ತೋಟಕ್ಕೆ ಒಯ್ದು ೩-೪ ಎಳನೀರು ಕೊಚ್ಚಿ ಬಲವಂತದಲ್ಲಿ ಕುಡಿಸುತ್ತಿದ್ದರು, ಎಳೆ ಕಾಯಿ ತಿನ್ನಿಸುತ್ತಿದ್ದರು. ಆಲೆಮನೆಗೆ ಕರೆದುಕೊಂಡು ಹೋಗಿ ಚೆಂಬುಗಟ್ಟಲೆ ಕಬ್ಬಿನ ಹಾಲು ಕುಡಿಸುತ್ತಿದ್ದರು. ಕಬ್ಬಿನ ಹಾಲಿಗೆ ಕರಿಮೆಣಸಿನ ಪುಡಿ, ನಿಂಬೆಹಣ್ಣು ಬೆರೆಸುವುದನ್ನು ತಪ್ಪಿಸುತ್ತಿರಲಿಲ್ಲ. ಬೆಲ್ಲದ ಪಾಕ ಬರುವ ಸಮಯಕ್ಕೆ ಕರೆದುಕೊಂಡು ಹೋಗಿ ಅಂಟಿನ ಬೆಲ್ಲ, ಪಾಕ ತಿನ್ನಿಸುತ್ತಿದ್ದರು. ಒಟ್ಟಿನಲ್ಲಿ ಅಲ್ಲಿ ಇರುವಷ್ಟು ದಿನವೂ ರಾಜೋಪಚಾರ.

ಆ ಹಳ್ಳಿಯಲ್ಲಿ ಒಂದು ಪುರಾತನ ಲಕ್ಷ್ಮಿಕೇಶವ ದೇವಾಲಯವಿದೆ. ಪ್ರತಿ ಶನಿವಾರ ಸಂಜೆ ಅಲ್ಲಿನ ಯುವಕರು ಊರಿನ ಸುತ್ತ ಭಜನೆ ಮಾಡಿಕೊಂಡು ದೇವಸ್ಥಾನದಲ್ಲಿ ಮಂಗಳವನ್ನು ಹಾಡುತ್ತಿದ್ದರು. ಬಹಳ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅಲ್ಲಿದ್ದಾಗ ನಾನೂ ಅವರ ಜೊತೆ ಸೇರಿಕೊಳ್ಳುತ್ತಿದ್ದೆ. ಒಟ್ಟಿನಲ್ಲಿ ಸಮಯ ಸರಿದುದೇ ಗೊತ್ತಾಗುತ್ತಿರಲಿಲ್ಲ.

ಹಳೇಬೀಡು ದೇವಸ್ಥಾನ
ಹಳೆಬೀಡಿನ ಸಮೀಪವೇ ಬಸ್ತಿಹಳ್ಳಿಯಲ್ಲಿ ಜಿನ ಮಂದಿರಗಳಿವೆ. ಅತಿ ಉತ್ಕೃಷ್ಟ ಶಿಲ್ಪಿಗಳಿಂದ ಕಟ್ಟಿಸಿದ ಅಪೂರ್ವ ಕಲಾಕೃತಿಗಳು ಅಲ್ಲಿವೆ. ಕಲ್ಲಿನ ಕಂಬಗಳಲ್ಲಿ ಸಪ್ತ ಸ್ವರಗಳು ಹೊರಹೊಮ್ಮುತ್ತವೆ. ಘಟ್ಟದಹಳ್ಳಿಗೆ ಹೋದಾಗೆಲ್ಲ ತಪ್ಪದೆ ಬಸ್ತಿಹಳ್ಳಿಗೂ ಹೋಗಿ ಬರುತ್ತಿದ್ದೆವು.

ನಮ್ಮ ತಾತ (ತಾಯಿಯವರ ತಂದೆ) ನಮ್ಮ ಸೋದರಮಾವನವರ ಮನೆಯಲ್ಲಿರುತ್ತಿದ್ದರು. ಆಗಾಗ ನಮ್ಮ ಮನೆಗೆ ಬಂದು ನಮ್ಮ ಸಂಗಡ ಸ್ವಲ್ಪ ದಿನಗಳನ್ನು ಕಳೆಯುತ್ತಿದ್ದರು. ಅವರು ಪ್ರೈಮರಿ ಸ್ಕೂಲ್ ಟೀಚರ್ ಆಗಿ ನಿವೃತ್ತರಾಗಿದ್ದರು. ನಮ್ಮ ಕನ್ನಡ ಪದ್ಯಗಳನ್ನು ಸುಶ್ರಾವ್ಯವಾಗಿ ಓದಿ ಅರ್ಥಗಳನ್ನು ತಿಳಿಸುತ್ತಿದ್ದರು. ಶಾಲೆಯ ಪಾಠಕ್ಕಿಂತಲೂ ಇದೇ ಸೊಗಸಾಗಿರುತ್ತಿತ್ತು. ಜೊತೆಗೆ ಅನೇಕ ನೀತಿ ಕಥೆಗಳನ್ನು ಹೇಳುತ್ತಿದ್ದರು. ಮಗ್ಗಿ, ಕೋಷ್ಟಕಗಳನ್ನು ಕಂಠ ಪಾಠ ಮಾಡಿದ್ದನ್ನು ಪುನರಾವರ್ತನೆ ಮಾಡಿ ಪ್ರತಿ ಸಂಜೆ ತಪ್ಪದೆ ಹೇಳಿಸುತ್ತಿದ್ದರು. ನನಗೆ ಉಪನಯನವಾದ ಮೇಲೆ ಸಂಜೆಯ ಸಮಯ ನನ್ನನ್ನು ಹೇಮಾವತಿ ನದಿಯ ದಂಡೆಗೆ ಕರೆದುಕೊಂಡು ಹೋಗಿ ಅಲ್ಲಿ ಸಂಧ್ಯಾವಂದನೆಗಳನ್ನು ಹೇಳಿ ಕಲಿಸಿದರು. ನಮ್ಮ ಕೊಳೆ ಬಟ್ಟೆಗಳನ್ನು ನಾವೇ ಒಗೆದುಕೊಳ್ಳುವುದನ್ನು ಅಭ್ಯಾಸ ಮಾಡಿಸಿದರು. ನನಗೆ ವಿಷ್ಣು ಸಹಸ್ರನಾಮ ಕಂಠಪಾಠ ಮಾಡಿಸಿದರು. ನಮ್ಮ ಅಜ್ಜಿ (ತಾಯಿಯ ತಾಯಿ) ನಾನು ಹುಟ್ಟುವ ಮೊದಲೇ ತೀರಿಕೊಂಡಿದ್ದರು.

ನಮ್ಮ ತಾಯಿಯವರು ನಮ್ಮ ತಾತನವರಂತೆ ಶಿಸ್ತಿನಲ್ಲೇ ಬೆಳೆದವರು. ಬಹಳ ಲಕ್ಷಣವಾದ ಸೌಂದರ್ಯವತಿ ಆಕೆ. ತುಂಬಾ ಸೌಮ್ಯ ಸ್ವಭಾವ. ನನ್ನನ್ನು ಕಂಡರಂತೂ ಅತೀವ ಮಮತೆ. ನನ್ನನ್ನು ಎಂದಿಗೂ ಗದರಿಸಿದ ಸಂದರ್ಭವೇ ಇಲ್ಲ. ನನ್ನ ಅನೇಕ ಸಲಹೆಗಳಿಗೆ ಅವರ ಒಪ್ಪಿಗೆಯೂ ಸಿಗುತ್ತಿತ್ತು. ಅಶಿಸ್ತನ್ನು ಸಹಿಸುತ್ತಿರಲಿಲ್ಲ. ಹೇಳಬೇಕಾದ ಮಾತುಗಳನ್ನು ನೇರವಾಗಿ ತಿಳಿಸುತ್ತಿದ್ದರು. ಬಹಳ ಮುಗ್ದ ಸ್ವಭಾವ. ನಮ್ಮ ಬೀದಿಯಲ್ಲಿ ವಾಸಿಸುತ್ತಿದ್ದ ಎಲ್ಲ ಜನಾಂಗದವರೊಂದಿಗೂ ತುಂಬಾ ಪ್ರೀತಿಯಿಂದ ಸ್ನೇಹದಿಂದ ವ್ಯವಹರಿಸುತ್ತಿದ್ದರು. ನಮ್ಮ ಬೀದಿಯ ವಾಸಿಗಳ ಮನೆಯಲ್ಲಿ ಅಥವಾ ಅವರ ನೆಂಟರಿಷ್ಟರ ಮನೆಯಲ್ಲಿ ಯಾವುದಾದರು ಸಮಾರಂಭವಿದ್ದರೆ ನಮ್ಮ ಮನೆಗೆ ಬಂದು ನಮ್ಮ ತಾಯಿಯವರ ಚಿನ್ನದ ಒಡವೆಗಳನ್ನು ಕೇಳಿ ಪಡೆದು ತಾವು ಧರಿಸಿ ನಂತರ ತಂದು ವಾಪಸು ತಲಪಿಸುತ್ತಿದ್ದರು. ಇದರಲ್ಲಿ ಏನಾದರು ಮೋಸ, ಅನ್ಯಾಯ ನಡೆಯಬಹುದೆನ್ನುವ ಕಿಂಚಿತ್ತು ಅನುಮಾನವೂ ಆಕೆಗಿರಲಿಲ್ಲ. ಅದು ಯಾವತ್ತು ಆಗಲೂ ಇಲ್ಲ. ಯಾರಾದರು ಮನೆಯಲ್ಲಿ ಕಷ್ಟ ಎಂದರೆ ಒಂದು ಮರದ ತುಂಬಾ ಅಕ್ಕಿ, ಬೇಳೆ ಮುಂತಾದವನ್ನು ಉಪಯೋಗಿಸಿಕೊಳ್ಳುವಂತೆ ಕೊಡುತ್ತಿದ್ದರು. ಯಾರ ನೋವನ್ನು ಕಂಡರೂ ಮರುಗುವ ಜೀವ. ಸಂಜೆಯ ಸಮಯ ಜಾತಿ-ಮತ ಭೇದವಿಲ್ಲದೆ ಹೆಂಗಸರು ನಮ್ಮ ಮನೆಯ ಅಂಗಳದಲ್ಲಿ ಸೇರಿ ತಮ್ಮ ದುಃಖ ದುಮ್ಮಾನಗಳನ್ನು ನಮ್ಮ ತಾಯಿಯವರಲ್ಲಿ ಹಂಚಿಕೊಳ್ಳುತ್ತಿದ್ದರು. ನಮ್ಮಮ್ಮ ಅವರುಗಳಿಗೆ ಸಾಂತ್ವನ ಹೇಳಿ ಕಳುಹಿಸುತ್ತಿದ್ದರು. ಅವರ ಕಷ್ಟ ಸುಖಗಳನ್ನು ಬೇರೆಯವರಲ್ಲಿ ಹೇಳಿದ್ದನ್ನು ನಾನು ಯಾವತ್ತು ಕೇಳಿಲ್ಲ. ತಮ್ಮ ೫೯ನೆ ವಯಸ್ಸಿನಲ್ಲೇ ದೇಹ ತ್ಯಜಿಸಿದಾಗ ನಮ್ಮೊಂದಿಗೆ ನಮ್ಮ ಬೀದಿಯ ಸುಮಾರು ೩೫-೪೦ ಮನೆಯವರೂ ದುಃಖಿಸಿದರು.

ನಮ್ಮ ತಂದೆಯವರು ಬಹಳ ಚಿಕ್ಕ ವಯಸಿನಲ್ಲೇ ಅವರ ತಂದೆ ತಾಯಿಯವರನ್ನು ಕಳೆದುಕೊಂಡು ಬೆಳೆದವರು. ತಂದೆ -ತಾಯಿಯ ಪ್ರೀತಿ, ಆರೈಕೆ ಇಲ್ಲದ ಮಗು ಹೇಗೆ ಬೆಳೆಯಬಹುದೋ ಹಾಗೆ ಬೆಳೆದವರು. ನಮ್ಮ ತಾಯಿಯವರನ್ನು ಮದುವೆ ಆದಮೇಲೆ ಮನುಷ್ಯನಾದವರು. ಸ್ವಲ್ಪ ಮುಂಗೋಪಿ. ಹೆಚ್ಚಾಗಿ ಕೋಪದ ಕೈಗೆ ಬುದ್ದಿ ಕೊಟ್ಟದ್ದೆ ಹೌದು. ಮಕ್ಕಳ ಮೇಲೆ ಬಹಳ ಪೊಸೆಸ್ಸಿವ್ ಅಂತಲೇ ಹೇಳಬಹುದು. 

ನಮ್ಮ ಆಟಗಳು ಕಬಡ್ಡಿ, ಖೋಖೋ, ಲಗೋರಿ, ಗೋಲಿ, ಬುಗುರಿ. ಇದಲ್ಲದೆ, ಬಾಲ್ ಬ್ಯಾಡ್ ಮಿಂಟನ್ ಮ್ಯಾಚುಗಳಿಗಾಗಿ ನಮ್ಮ ಊರಿನ ಹತ್ತಿರದಲ್ಲೇ ಇರುವ ಬೈಕೆರೆ, ಸುಂದೆಕೆರೆ, ಆನೆಮಹಲ್, ಬಾಗೆಗಳಿಗೆ ಹೋಗುತ್ತಿದ್ದೆವು. ಬಾಗೆಗೆ ಮಾತ್ರ ಬಸ್ಸಿನಲ್ಲಿ, ಉಳಿದ ಹಳ್ಳಿಗಳಿಗೆ ನಡೆದೇ ಹೋಗುತ್ತಿದ್ದೆವು. ದಾರಿಯಲ್ಲಿ, ತೋಟಗಳಲ್ಲಿ, ಕಾಡಿನಲ್ಲಿ ಧಾರಾಳವಾಗಿ ಸಿಗುತ್ತಿದ್ದ ಸೀಬೆ, ನೇರಳೆ, ಚೊಟ್ಟೆ ಹಣ್ಣುಗಳ ಸೇವನೆ! ನಮ್ಮ ಊರು ಬಿಟ್ಟಮೇಲೆ ನಾನು ಚೊಟ್ಟೆ ಹಣ್ಣನ್ನು ನೋಡಿಯೇ ಇಲ್ಲ. ಬೆಣ್ಣೆಯಷ್ಟು ಮೃದುವಾದ, ಸಣ್ಣ ಚೆರ್ರಿ ಗಾತ್ರದ ಬಿಳಿಯ ಸಿಹಿಯಾದ ಹಣ್ಣು, ಮುಳ್ಳಿನ ಗಿಡ. ಗುಡ್ಡಗಳ ಮೇಲೆ ಪೊದೆಯಂತೆ ಬೆಳೆಯುತ್ತಿತ್ತು.

ಮಳೆಗಾಲಕ್ಕೆ ಮುನ್ನ ಸೌದೆ ಸಂಗ್ರಹ ಮಲೆನಾಡಿನ ಎಲ್ಲ ಮನೆಗಳಲ್ಲಿ ಸಾಮಾನ್ಯ ಕ್ರಿಯೆ. ಗಾಡಿಗಳಲ್ಲಿ ತೋಟಗಳಿಂದ ಅಥವಾ ಕಾಡಿನಿಂದ ತಂದು ಮಾರುತ್ತಿದ್ದರು. ನಮ್ಮ ಮನೆಗೆ ಸುಮಾರು ೪೦ ಗಾಡಿ ಸೌದೆ ಸಂಗ್ರಹ ಮಾಡಿಸುತ್ತಿದ್ದರು. ನಮ್ಮ ಮನೆಯ ರೈತ ಇಲ್ಲದ್ದಿದ್ದರೆ ನಮ್ಮ ತಂದೆ ಸೌದೆಗಳನ್ನು ಬಹಳ ಅಂದವಾಗಿ ಜೋಡಿಸುತ್ತಿದ್ದರು. ನಾವುಗಳು, ಹುಡುಗರು  ಅವರಿಗೆ ಸೌದೆ ಹೊತ್ತು ತಂದು ಪೂರೈಸಬೇಕಿತ್ತು. ಈ ಕೆಲಸವನ್ನು ಬಹಳ ಹುಮ್ಮಸ್ಸಿನಿಂದ ಮಾಡುತ್ತಿದ್ದೆವು. ಈ ಕಾರ್ಯಕ್ರಮ ಹಲವಾರು ದಿವಸಗಳದ್ದು. ಪ್ರತಿದಿನ ಈ ಕೆಲಸಕ್ಕಾಗಿ ನಮ್ಮನ್ನು ಉತ್ತೇಜಿಸಲು ಬಗೆ-ಬಗೆಯ ತಿಂಡಿಗಳ ಪೂರೈಕೆ ಆಗುತ್ತಿತ್ತು. ಸೌದೆಗಳಿಗಾಗಿಯೇ ಒಂದು ಶೆಡ್ (ಕೊಟ್ಟಿಗೆ) ಕಟ್ಟಿಸುತ್ತಿದ್ದರು. 

ನಮ್ಮ ಮನೆಯಲ್ಲಿ ೪ ಎಮ್ಮೆ, ೨ ಹಸು, ಒಂದು ಜೊತೆ ಎತ್ತುಗಳನ್ನೂ ಸಾಕಿದ್ದರು. ಇವುಗಳಿಗಾಗಿ ಒಂದು ಕೊಟ್ಟಿಗೆ. ನಮ್ಮ ತಾಯಿಯವರು ಮೂಕ ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಹೇಳುತ್ತಿದ್ದರು. ನಮಗೂ ಅವುಗಳನ್ನು ನೋಡಿದಾಗ ಕರುಣೆ ಉಕ್ಕಿ ಬರುತ್ತಿತ್ತು. ಹುಲ್ಲು, ಹಿಂಡಿ ಮನೆಯಲ್ಲಿ ಧಾರಾಳವಾಗಿ ಇರುತ್ತಿತ್ತು. ನಾವು ಅವನ್ನು ಧಾರಾಳವಾಗಿಯೇ ಉಪಯೋಗಿಸುತ್ತಿದ್ದೆವು. ನಮ್ಮ ಮನೆಯ ಕೆಲಸದ ಆಳು ಬರದೆ ಚಕ್ಕರ್ ಕೊಟ್ಟ ದಿನ ಕೊಟ್ಟಿಗೆ ಶುಚಿ ಮಾಡುವ ಕೆಲಸವೂ ನಮ್ಮದೇ, ನಮ್ಮ ತಾಯಿ ಅಥವಾ ತಂದೆಯವರೊಂದಿಗೆ. ಈ ಕೆಲಸ ಮಾಡಿದ ದಿನ ಏನೋ ಧನ್ಯ ಭಾವ. ಪುಣ್ಯವೆಲ್ಲ ನಮಗೆ ಸಿಕ್ಕಿತೆಂಬ ತೃಪ್ತಿ. ಎತ್ತುಗಳಿಗಾಗಿ ಪ್ರತಿದಿನ ನಮ್ಮ ಮನೆಯಲ್ಲಿ ಹುರುಳಿ ಬೇಯಿಸುತ್ತಿದ್ದರು. ಬೇಯಿಸಿದ ಹುರುಳಿ ಎತ್ತುಗಳಿಗಾಗಿ, ಅದರ ಕಟ್ಟು ನಮಗಾಗಿ. ಹುರುಳಿ ಕಟ್ಟಿನ ಸಾರಿನ ರುಚಿ ತಿಂದವರಿಗೇ ಗೊತ್ತು. ಬಹಳ ಸೊಗಸಾಗಿರುತ್ತೆ. ಮಳೆಗಾಲಕ್ಕಂತು ಹೇಳಿ ಮಾಡಿಸಿದ್ದು. ನಾವೊಬ್ಬರೇ ಎಷ್ಟು ದಿನ ಇದನ್ನು ತಿನ್ನಲು ಸಾಧ್ಯ? ಒಂದೊಂದು ದಿನ ಒಬ್ಬೊಬ್ಬರ ಮನೆಗೆ ಕೊಡಲು ಶುರು ಮಾಡಿದೆವು. ಇದಕ್ಕಾಗಿ ಪ್ರತಿದಿನ ನಮ್ಮ ಮನೆಯ ಮುಂದೆ ಸಾಲು-ಸಾಲು ಜನ. ನಮ್ಮ ತಾಯಿಯವರಲ್ಲಿ ಜನಗಳ ಆಗ್ರಹ ನಮಗೆ ಕೊಡಿ, ತಮಗೆ ಕೊಡಿ ಎಂದು! ಇದೆ ರೀತಿ ಎಮ್ಮೆ, ಹಸುಗಳು ಕರು ಹಾಕಿದಾಗ ಗಿಣ್ಣು ಹಾಲಿಗೆ ನಮ್ಮ ಮನೆಗೆ ಜನಗಳ ಸಾಲು! ನಮಗೂ ಏನೋ ಪ್ರಾಮುಖ್ಯತೆ ಸಿಕ್ಕಿದ ಭಾವ!

ಹಳೆಯದನೆಲ್ಲ ಬರೆಯುತ್ತ ಕೂತರೆ ಮುಗಿಯುವುದೋ ಇಲ್ಲವೋ ಅನ್ನಿಸುತ್ತೆ. ಸಧ್ಯಕ್ಕೆ ಇಷ್ಟು ಸಾಕು, ಉಳಿದದ್ದು ಮುಂದಿನ ಬ್ಲಾಗಿನಲ್ಲಿ... 

----------------------------------------------------------------------------------------------------
ನಂಜುಂಡಸ್ವಾಮಿ. 

Image courtesy: google.com 

No comments:

Post a Comment