Sunday 13 June 2021

ಮಲೆನಾಡ ಜಾವಳಿ


ಮಲೆನಾಡ ಸುಂದರ ಸ್ವಚ್ಛಂದ ಪರಿಸರದಲ್ಲಿ ಹುಟ್ಟಿ,ಬೆಳೆದು, ಹೊಟ್ಟೆಪಾಡಿಗಾಗಿ ನಗರ ಸೇರಿ ಇಲ್ಲಿಯ ವಾಹನದಟ್ಟಣೆ, ಪರಿಸರ ಮಾಲಿನ್ಯ, ಜೀವನ ಜಂಜಾಟಗಳಿಂದ ಬೇಸತ್ತಿದ್ದಾಗ, ಪ್ರಕೃತಿಯ ಮಡಿಲಿಗೆ ಪ್ರಯಾಣ ಬೆಳೆಸುವ ಯಾವ ಅವಕಾಶವನ್ನು ಕಳೆದುಕೊಳ್ಳಲಾಗುವುದಿಲ್ಲ.
ಹಾಗೆ, ನಾವೆಲ್ಲಾ ಸೇರಿ, ಈ ಭಾರಿ ಹೇಮಾವತಿ ನದಿಯ ಉಗಮ ಸ್ಥಳಕ್ಕೆ ಪ್ರಯಾಣ ಮಾಡಲು ನಿರ್ಧರಿಸಿದೆವು. ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲುಕಿನ 'ಜಾವಳಿ' ಎಂಬ ಸ್ಥಳ ನಮ್ಮ ನಾಡಿನ ಪ್ರಸಿದ್ದ ಹೇಮಾವತಿ ನದಿಯ ಉಗಮಸ್ಥಾನ. ಕೊಟ್ಟಿಗೆಹಾರ - ಕಳಸ ರಸ್ತೆಯ ೯ನೆ ಕಿ.ಮೀ.ಯಲ್ಲಿ ಬಲಕ್ಕೆ ತಿರುಗಿ ಒಂದೂವರೆ ಕಿ.ಮೀ ಕಾಡು ದಾರಿಯಲ್ಲಿ ಚಲಿಸಿದರೆ, ದಟ್ಟ ಕಾಡಿನ ನಡುವಿನ ಹೇಮಾವತಿ ಉಗಮಸ್ಥಾನವನ್ನು ತಲುಪಬಹುದು. ಕಾಡು ಹಾದಿಯಾದರೂ, ಸಣ್ಣ ವಾಹನಗಳಲ್ಲಿ ಗಮ್ಯ ಸ್ಥಾನ ತಲುಪಲು ಅಡ್ಡಿ ಇಲ್ಲ. ಸಕಲೇಶಪುರದಿಂದ ಕೊಟ್ಟಿಗೆಹಾರದವರೆಗಿನ ರಾಜ್ಯ ಹೆದ್ದಾರಿಯ ಸ್ಥಿತಿ ಮಾತ್ರ ಶೋಚನೀಯ.


ಬಿಂದುವಾಗಿ ಉಗಮಿಸುತ್ತಿರುವ ಹೇಮಾವತಿ

ಜಾವಳಿಯಲ್ಲಿ ಹೇಮಾವತಿ ದಟ್ಟ ಕಾಡಿನ ಬೆಟ್ಟದ ಮೇಲಿಂದ ಸಣ್ಣ ಬಿಂದುಗಳಾಗಿ ಜನಿಸುತ್ತಾಳೆ. ಕಡುಬೇಸಿಗೆಯಲ್ಲೂ, ಬಿರುಮಳೆಯಲ್ಲೂ ನೀರಿನ ಹರಿವು ಒಂದೇ ಸಮನಾಗಿರುತ್ತದೆ. ಉಗಮವಾದ ನದಿ ಪಕ್ಕದಲ್ಲಿರುವ ಸಣ್ಣ ಕೊಳದಲ್ಲಿ ಸಂಗ್ರಹಗೊಂಡು, ಅದರ ಪಕ್ಕದ ಸ್ವಲ್ಪ ದೊಡ್ಡ ಕೊಳಕ್ಕೆ ಅಂತರಗಂಗೆಯಾಗಿ ಪ್ರವಹಿಸುತ್ತಾಳೆ. ಆ ಕೊಳದಿಂದ ಸ್ವಲ್ಪ ದೂರದಲ್ಲಿರುವ ಒಂದು ಕೆರೆಗೆ ಗುಪ್ತ ಗಾಮಿನಿಯಾಗಿ ಬಂದು ಸೇರುತ್ತಾಳೆ. ಅಲ್ಲಿಂದ ಮುಂದೆ ಸಣ್ಣ ಝರಿಯಾಗಿ, ಹೊಳೆಯಾಗಿ, ನದಿಯಾಗಿ, ಕಾವೇರಿಯನ್ನು ಸೇರಿ ಅದರ ಮೂಲಕ ಬಂಗಾಳ ಕೊಲ್ಲಿಯಲ್ಲಿ ಲೀನವಾಗುತ್ತಾಳೆ.

ಶಕ್ತಿ ಗಣಪತಿಯ ಗುಡಿ 

ಉಗಮ ಸ್ಥಳದಲ್ಲಿ ವಿನಾಯಕನ ಪುಟ್ಟ ಗುಡಿಯೊಂದಿದೆ. ಮುದ್ದಾದ ದೇವ ವಿಗ್ರಹ, ಗುಡಿಯ ವಿನ್ಯಾಸ ಚಾರಣಿಗರ ಕಣ್ಮನ ಸೆಳೆಯುತ್ತದೆ. ಅಲ್ಲಿನ ಪರಿಸರ, ಪ್ರಕೃತಿ ವಿವರಿಸಲು ಭಾಷೆ ಸಾಲದು. ಸುಂದರಾತಿಸುಂದರ ಎಂದರೆ ಸತ್ಯಕ್ಕೆ ಹತ್ತಿರವಾಗಬಹುದೇನೋ! ಶಕ್ತಿ ಗಣಪತಿ ಹಾಗು ಹೇಮಾವತಿಯ ದರ್ಶನದಿಂದ, ಅಲ್ಲಿಗೆ ತಲುಪಿದ ಎಲ್ಲ ಶ್ರಮ, ಆಯಾಸ ಮರೆಯಾಗುತ್ತದೆ. ಮನಸ್ಸು ಮುದಗೊಳ್ಳುತ್ತದೆ.
ದೇವಳದ ಪರಿಸರ ಅತ್ಯಂತ ಶುಚಿಯಾಗಿದೆ. ದೇವಾಲಯದ ಮುಂದಿರುವ ದೊಡ್ಡ ಸಂಪಿಗೆ ಮರ ಪೂಜೆಗೆ ಹೂವನ್ನು ಒದಗಿಸುವುದರೊಂದಿಗೆ, ಸುತ್ತಮುತ್ತ ಪರಿಮಳವನ್ನೂ ಪಸರಿಸುತ್ತದೆ. ಹೇಮಾವತಿಯ ತೀರ್ಥ ಅತಿ ಮಧುರವಾಗಿದೆ
.
ಪರಿಸರದ ಮಡಿಲಲ್ಲಿ ಅನಂದದಲ್ಲಿದ್ದಾಗ ಮತ್ತೆ ನಗರದ ಜಂಜಾಟಕ್ಕೆ ಮರಳುವ ನೆನಪಾಯಿತು. ಒಲ್ಲದ ಮನಸ್ಸಿನಿಂದ ಹಿಂದಿರುಗಿದೆವು.

S.Nanjundaswamy


3 comments:

  1. Glad you are enjoying Nature at its best.You have tempted me to to do this trip now ! Giridhar

    ReplyDelete
  2. Bahala Khushi Aaythu Uncle nimma blog odi. Chikmagalur is full of such amazing places. Keep writing.

    ReplyDelete
  3. Excellent Appa. You should write more. You have found yourself a good hobby!

    Shruthi

    ReplyDelete