Wednesday, 19 October 2011

ಮೈಸೂರು ದಸರಾ ಎಷ್ಟೊಂದು ಸುಂದರ!

ದೀಪಗಳಿಂದ ಕಂಗೊಳಿಸುತ್ತಿರುವ ಮೈಸೂರು ಅರಮನೆ
ಬಹುಷಃ ೧೯೬೦ - ೧೯೬೧ ಇರಬೇಕು. ಆಗ ಶ್ರೀ ಜಯಚಾಮರಾಜ ಒಡೆಯರ್ ರವರು ರಾಜ/ರಾಜ್ಯಪಾಲರಾಗಿದ್ದರು. ನಾನು ನಮ್ಮ ತಂದೆಯವರ ಜೊತೆ ಮೈಸೂರು ದಸರಾ ನೋಡಲು ಬಂದಿದ್ದೆ. ನಮ್ಮ ಸೋದರತ್ತೆಯವರ ಮಗನ ಮನೆಯಲ್ಲಿ ನಮ್ಮ ಕ್ಯಾಂಪ್. ಅವರ ಮನೆ ಒಂಟಿಕೊಪ್ಪಲಿನಲ್ಲಿ. ಅವರು ಆಗ ಕಂದಾಯ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ನಾವು ಬಂದದ್ದು ದುರ್ಗಾಷ್ಟಮಿಯ ದಿವಸ. ಅಂದಿನ ರಾಜ ದರ್ಬಾರ್ ಪ್ರವೇಶಕ್ಕೆ ೨-೩ ಪಾಸ್ ಗಿಟ್ಟಿಸಿಕೊಂಡು ನಮ್ಮ ತಂದೆಯವರೂ ಹಾಗು ನನ್ನ ಸೋದರತ್ತೆಯ ಇಬ್ಬರು ಮಕ್ಕಳೂ ತಯಾರಾದರು. ನಾನು ಅವರ ಮಕ್ಕಳ ಜೊತೆಯಲ್ಲಿ ಅರಮನೆಯ ಮೈದಾನದಲ್ಲಿ ಅರಮನೆಯ ದೀಪಾಲಂಕಾರ ಹಾಗು ಸುತ್ತಲಿನ ವೈಭವಗಳನ್ನು ನೋಡಿ ಕಣ್ಣು ತುಂಬಿಕೊಂಡೆ. ದರ್ಬಾರಿಗೆ ವಿಶೇಷ ವಸ್ತ್ರಗಳನ್ನು ಧರಿಸಿಯೇ ಹೋಗಬೇಕಾಗಿತ್ತು. ಪ್ಯಾಂಟ್ ಮೇಲೆ ಉದ್ದನೆಯ ಕರಿಕೋಟು, ಮೈಸೂರು ಪೇಟ, ಜರತಾರಿ ಶಲ್ಯ ಇವು ವೇಷ ಭೂಷಣ. ಇವೆಲ್ಲ ಬಾಡಿಗೆಗೆ ಸಿಗುತ್ತಿದ್ದವು. ಸಂಜೆ ೭ರಿಂದ ೯ರವರೆಗೆ ನವರಾತ್ರಿಯಲ್ಲಿ ದರ್ಬಾರ್ ನಡೆಯುತ್ತಿತ್ತು. ಮಹಾರಾಜರ ಸಿಂಹಾಸನಾರೋಹಣ ಆದ ತಕ್ಷಣ ದೀಪಗಳೆಲ್ಲ ಜಗ್ಗನೆ ಹೊತ್ತಿಕೊಳ್ಳುತ್ತಿದ್ದವು. ಅವರು ಸಿಂಹಾಸನದಿಂದ ಏಳುತ್ತಿದ್ದಂತೆ ಆರುತ್ತಿದ್ದವು. ಎರಡು ಘಂಟೆ ರಾಜರ ಎದುರಿನಲ್ಲಿ ರಮಣೀಯವಾದ ಸಂಗೀತ, ನೃತ್ಯ, ಕುಸ್ತಿಗಳು ಏರ್ಪಾಡಾಗಿರುತ್ತಿತ್ತು. ರಾಜರನ್ನು ದೇವರಂತೆ ಕಾಣುತ್ತಿದ್ದ ಜನರು, ಅವರಿಗೆ ಬೆನ್ನು ತೋರಿಸದಂತೆ ಓಡಾಡುತ್ತಿದ್ದರು. ರಾಜರಿಗೆ ದರ್ಬಾರಿಗರು ಏನಾದರು ನಜರು ಒಪ್ಪಿಸುತ್ತಿದ್ದರು. ರಾಜರಿಂದಲೂ ಅವರಿಗೆ ಯಥಾ ಮರ್ಯಾದೆ ದೊರೆಯುತ್ತಿತ್ತು. 

ದಸರಾ ಮೆರವಣಿಗೆ
ದರ್ಬಾರ್ ಮುಗಿದ ಮೇಲೆ ಮನೆಗೆ ಹೋಗುವಾಗ ನಮ್ಮ ತಂದೆಯವರು ನನಗೆ ಒಂದು ಜೊತೆ ಶೂಗಳನ್ನು ಕೊಡಿಸಿದರು. ಚಪ್ಪಲಿಯನ್ನೇ ಧರಿಸದ ನನಗೆ ಅತಿ ಸಂಭ್ರಮ. ಮರುದಿನ ಮಹಾನವಮಿ - ಆಯುಧಪೂಜೆ. ಅರಮನೆಯಲ್ಲಿ ಆಯುಧಪೂಜೆ ವೀಕ್ಷಿಸಲು ಬೆಳಗಿನ ೯ರ ಸಮಯಕ್ಕೆ ಬಂದೆವು. ಮಹಾರಾಜರು ಅರಮನೆಯ ಮುಂಬಾಗದಲ್ಲಿ ಪೂಜೆ ನೆರವೇರಿಸುತ್ತಿದ್ದರು. ಪಟ್ಟದ ಆನೆ, ಕುದುರೆ, ಹಸು, ನಂದಿ, ತೋಪುಗಳು, ಪಟ್ಟದ ಕತ್ತಿ, ಕುದುರೆಗಾಡಿಗಳು, ಮುಂತಾದ ರಾಜ ಸೌಕರ್ಯ - ಸವಲತ್ತುಗಳಿಗೆಲ್ಲ ಪೂಜೆ ನೆರವೇರುತ್ತಿತ್ತು. ರಾಜಪೋಷಾಕು ಧರಿಸಿ, ಅವರ ಪುರೋಹಿತ ವೃಂದದಿಂದ ಸುತ್ತುವರಿದ ರಾಜರನ್ನು ನೋಡುವುದೇ ಒಂದು ಸೊಗಸಾದ ಅನುಭವವಾಗಿರುತ್ತಿತ್ತು. ಅದರೊಂದಿಗೆ ವೈಭವದ ಪೂಜೆ, ಮಂತ್ರಘೋಶ, ಸುತ್ತಲಿನ ದೇವಾಲಯಗಳಲ್ಲಿನ ಪೂಜೆಗಳು, ಒಂದು ಬಗೆಯ ವಿಶಿಷ್ಟ ಅನುಭೂತಿಯನ್ನು ಒದಗಿಸುತ್ತಿತ್ತು. ಇವೆಲ್ಲ ಮುಗಿಯುವ ಹೊತ್ತಿಗೆ ಸುಮಾರು ಮದ್ಯಾಹ್ನ ೧೨ರ  ಸಮಯವಾಗುತ್ತಿತ್ತು. ನಾನು ನನ್ನ ಹೊಸ ಶೂ ಧರಿಸಿ ಹೆಮ್ಮೆಯಿಂದ ಓಡಾಡುತ್ತಿದ್ದೆ. ಮನೆಗೆ ಹೋಗುವ ಹೊತ್ತಿಗೆ ಶೂ ಕಚ್ಚಿ ನಡೆದಾಡಲೂ ಆಗಲಿಲ್ಲ! ಸಾಯಂಕಾಲ ದಸರಾ ವಸ್ತು ಪ್ರದರ್ಶನಕ್ಕೆ ಭೇಟಿ. ಶೂ ಕಚ್ಚಿರುವುದಕ್ಕೆ ಔಷಧಿಯೇನು ಇಲ್ಲ. ಶೂ ಹಾಕಿಕೊಂಡೆ ಅಭ್ಯಾಸ ಮಾಡಿಕೊಳ್ಳಬೇಕೆಂದು ನನ್ನನ್ನು ಶೂ ಹಾಕಿಸಿಕೊಂಡೆ ಕರೆದುಕೊಂಡು ಹೋದರು. ನನಗೆ ವಸ್ತು ಪ್ರದರ್ಶನವೂ ಬೇಡ ಏನೂ ಬೇಡ. ಮನೆಗೆ ಹೋಗಿ ಶೂ ಕಳಚಿದರೆ ಸಾಕಾಗಿತ್ತು! ಹಾಗೆ ಕುಂಟಿಕೊಂಡೇ ಸುತ್ತಾಡಿ ಮನೆಗೆ ಹೋಗುವ ಹೊತ್ತಿಗೆ ನನಗೆ ಜ್ವರವೇ ಬಂದಿತ್ತು. ವಸ್ತುಪ್ರದರ್ಶನದಲ್ಲಿ ಅನೇಕ ಸಣ್ಣ-ಪುಟ್ಟ ಗೃಹೋಪಯೋಗಿ ವಸ್ತುಗಳು ಸಿಗುತ್ತಿದ್ದವು. ಅದರಲ್ಲೂ ಹಳ್ಳಿಯಿಂದ ಬಂದವರಿಗೆ ಸಂಭ್ರಮವೋ ಸಂಭ್ರಮ! ಕಂಡದ್ದನ್ನೆಲ್ಲ ಕೊಳ್ಳುತ್ತಿದ್ದೆವು. ನನ್ನ ತಂಗಿಯರಿಗಾಗಿ ಚನ್ನಪಟ್ಟಣದ ಗೊಂಬೆಗಳು, ನನಗೆ ಕೀ ಕೊಟ್ಟು ಓಡಿಸುವ ಕಾರು, ನೀರಿನಲ್ಲಿ ಚಲಿಸುವ ದೋಣಿ ಮುಂತಾದ ಮನಸೂರೆಗೊಳ್ಳುವ  ವಸ್ತುಗಳನ್ನು ಕೊಂಡೆವು.

ಜಂಬೂ ಸವಾರಿ 
ಮರುದಿನ ವಿಜಯದಶಮಿ. ಪ್ರಖ್ಯಾತ ಜಂಬೂ ಸವಾರಿಯ ದಿವಸ. ನಾನಂತೂ ಹಠ ಹಿಡಿದು ಶೂ ರಹಿತನಾಗಿ ಬರಿಗಾಲಲ್ಲಿ ಬಂದಿದ್ದೆ. ಸಯ್ಯಾಜಿರಾವ್ ರಸ್ತೆಯ ಕಿವುಡ-ಮೂಕರ ಶಾಲೆಯ ಬಳಿ ಮಧ್ಯಾಹ್ನ ೧ ಘಂಟೆಯಿಂದ ಕಾದು ಕುಳಿತಿದ್ದೆವು. ಮೆರವಣಿಗೆಯಲ್ಲಿ ಸ್ಕೌಟ್ಸ್-ಗೈಡ್ಸ್, ಅರಮನೆಯ ಪದಾತಿದಳ, ಪೋಲಿಸ್, ಸೈನ್ಯ , ಅರೆಸೈನ್ಯ, ಅರಮನೆಯ ಗಜ ಪಡೆ, ಅಶ್ವ ಪಡೆ, ಆಸ್ಥಾನ ಸಂಗೀತಗಾರರು, ಕೊಲಾಟದವರು, ನಂದಿ ಧ್ವಜ ಕುಣಿತ ಮುಂತಾದ ಅನೇಕ ಕಲಾ ಪ್ರಕಾರಗಳೂ ಭಾಗವಸಿದ್ದವು. ಮೆರವಣಿಗೆ ಬಹಳ ಶಿಸ್ತಿನಿಂದ ಕೂಡಿರುತ್ತಿತ್ತು. ಕಲಾವಿದರು ತಮ್ಮ ಕಲೆಗಳ ಪ್ರದರ್ಶನವನ್ನು ಬಹಳ ಮುತುವರ್ಜಿಯಿಂದ ಮಾಡುತ್ತಿದ್ದರು. ಅಂಬಾರಿ ಆನೆ ನಾವಿರುವಲ್ಲಿಗೆ ಬರುವ ವೇಳೆಗೆ ಸಮಯ ಸರಿ-ಸುಮಾರು ಸಂಜೆ ೫-೫.೩೦. ಅಂಬಾರಿಯಲ್ಲಿ ಶ್ರೀಮನ್ಮಹಾರಾಜರು ಮುಂದುಗಡೆ ಅವರ ಹಿಂದೆ ಅವರ ಸೋದರ ಮಾವಂದಿರು ಕುಳಿತಿದ್ದರು. ಗಜ ಗಾಂಬೀರ್ಯ, ರಾಜ ಗಾಂಬೀರ್ಯ, ರಾಜ ಕಳೆ, ನೋಡಿ ತಿಳಿಯಬೇಕಿದ್ದರೆ ಅದುವೇ ಸರಿಯಾದ ಸಂಧರ್ಭ. ನಯನ ಮನೋಹರವಾದ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಇಂದಿನಂತೆ ಅಂದು ಅತಿಯಾದ ಸರಕಾರೀ ಮಧ್ಯಸ್ಥಿಕೆ ಇರಲಿಲ್ಲ. ಜನಸಾಮಾನ್ಯರ ಸಮರ್ಪಣಾ ಭಾವದಿಂದ ಕಾರ್ಯಕ್ರಮಗಳು ಬಹಳ ಸಮರ್ಪಕವಾಗಿ ನಡೆಯುತ್ತಿದ್ದವು. ನಿಜವಾದ ಅರ್ಥದಲ್ಲಿ ಅದು ನಾಡ ಹಬ್ಬವಾಗಿತ್ತು. ಇಂದಿಗೂ ಮೈಸೂರು ಸುತ್ತ-ಮುತ್ತಲಿನ ಜನಗಳಿಗೆ ರಾಜ ಕುಟುಂಬದ ಬಗ್ಗೆ ಅಷ್ಟೇ ಆದರ, ಪ್ರೀತಿ, ವಿಶ್ವಾಸವಿದೆ. ಅದೇ ಗೌರವ ಇಂದಿಗೂ ರಾಜಕುಟುಂಬಕ್ಕೆ ಸಿಗುತ್ತಿದೆ. ಅಂದಿನ ಜಂಬೂ ಸವಾರಿಯಲ್ಲಿ ಜಾನಪದ ಕಲಾವಿದರ, ಕಲೆಗಳ ಸೊಗಡಿರುತ್ತಿತ್ತು. ಅನೇಕ ಕಲಾ ಪ್ರಕಾರದವರು ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದರು. ನಗರವಾಸಿಗಳಲ್ಲು ದಸರೆಯ ಸಂಭ್ರಮ ಕಾಣುತ್ತಿತ್ತು. ಸಾಮಾನ್ಯವಾಗಿ ಎಲ್ಲರ ಮನೆಗಳಿಗೂ ನೆಂಟರಿಷ್ಟರು ಬರುತ್ತಿದ್ದರು. ನೆಂಟರು ಬಂದರೆ ಸಂತೋಷ, ಸಂಭ್ರಮ ಪಡುತ್ತಿದ್ದರು. ನೋಡಬೇಕಾದ ಸ್ಥಳಗಳಿಗೆ ಅವರನ್ನು ಕರೆದುಕೊಂಡು ಹೋಗಿ ತೋರಿಸುತ್ತಿದ್ದರು. ನಾನು ಆ ಕಾಲದಲ್ಲೇ ನೋಡಿದ ಜಗನ್ಮೋಹನ ಅರಮನೆ, ಚಾಮುಂಡಿ ಬೆಟ್ಟದ ನೆನಪು ಮಾಸದೆ ಉಳಿದಿದೆ. ಜೂ ನಲ್ಲಿ ತಿರುಗಿ ಕಾಲು ನೋವು ಬಂದಿದ್ದನ್ನು ನೆನಸಿಕೊಂಡರೆ ಈಗಲೂ ಕಾಲು ನೋಯಲು ಶುರುವಾಗುತ್ತದೆ!

ಜಂಬೂ-ಸವಾರಿ ಮುಗಿದ ನಾಲ್ಕೈದು ದಿನಗಳಲ್ಲೇ ಬೆಟ್ಟದಲ್ಲಿ ರಥೋತ್ಸವ. ಮಹಾರಾಜರು ರಥದಲ್ಲಿ ಕುಳಿತಿರುವ ದೇವರ ಕಡೆ ಮುಖ ಮಾಡಿ ಹಿಮ್ಮುಖವಾಗಿ ಚಲಿಸುತ್ತಿರುವ ಸೊಬಗನ್ನು ನೋಡಿ ಅನುಭವಿಸಿಯೇ ತಿಳಿಯಬೇಕು. ಈಗ ಅಂದಿಗಿಂತ ಹೆಚ್ಚು ಜನ ಸೇರುತ್ತಾರೆ. ವ್ಯಾಪಾರ - ವಹಿವಾಟು ಬಹಳ ಹೆಚ್ಚಾಗಿದೆ. ಅನುಕೂಲಗಳು ಚೆನ್ನಾಗಿವೆ. ಜನಗಳಲ್ಲು ಹಣ ಕಾಸಿನ ಓಡಾಟ ಚೆನ್ನಾಗಿದೆ. ಆದರು ಅಂದಿನ ಮುಗ್ದತೆ, ಸಂಭ್ರಮದ ಕೊರತೆ ಮಾತ್ರ ಕಾಣುತ್ತದೆ! 

--
ನಂಜುಂಡಸ್ವಾಮಿ

Image Courtesy: Internet/Google image search

2 comments:

  1. Appa,
    This is very nice. I remember you taking me to the palace when I was 6 or 7. I also remember that I turned my back and walked out, saying I was bored! Rahul does the same to me now!

    ReplyDelete
  2. Hello Uncle! :)
    Your blogs are awesome! Please keep writing!!! :) :)

    ReplyDelete