![]() |
ದೀಪಗಳಿಂದ ಕಂಗೊಳಿಸುತ್ತಿರುವ ಮೈಸೂರು ಅರಮನೆ |
ಬಹುಷಃ ೧೯೬೦ - ೧೯೬೧ ಇರಬೇಕು. ಆಗ ಶ್ರೀ ಜಯಚಾಮರಾಜ ಒಡೆಯರ್ ರವರು ರಾಜ/ರಾಜ್ಯಪಾಲರಾಗಿದ್ದರು. ನಾನು ನಮ್ಮ ತಂದೆಯವರ ಜೊತೆ ಮೈಸೂರು ದಸರಾ ನೋಡಲು ಬಂದಿದ್ದೆ. ನಮ್ಮ ಸೋದರತ್ತೆಯವರ ಮಗನ ಮನೆಯಲ್ಲಿ ನಮ್ಮ ಕ್ಯಾಂಪ್. ಅವರ ಮನೆ ಒಂಟಿಕೊಪ್ಪಲಿನಲ್ಲಿ. ಅವರು ಆಗ ಕಂದಾಯ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ನಾವು ಬಂದದ್ದು ದುರ್ಗಾಷ್ಟಮಿಯ ದಿವಸ. ಅಂದಿನ ರಾಜ ದರ್ಬಾರ್ ಪ್ರವೇಶಕ್ಕೆ ೨-೩ ಪಾಸ್ ಗಿಟ್ಟಿಸಿಕೊಂಡು ನಮ್ಮ ತಂದೆಯವರೂ ಹಾಗು ನನ್ನ ಸೋದರತ್ತೆಯ ಇಬ್ಬರು ಮಕ್ಕಳೂ ತಯಾರಾದರು. ನಾನು ಅವರ ಮಕ್ಕಳ ಜೊತೆಯಲ್ಲಿ ಅರಮನೆಯ ಮೈದಾನದಲ್ಲಿ ಅರಮನೆಯ ದೀಪಾಲಂಕಾರ ಹಾಗು ಸುತ್ತಲಿನ ವೈಭವಗಳನ್ನು ನೋಡಿ ಕಣ್ಣು ತುಂಬಿಕೊಂಡೆ. ದರ್ಬಾರಿಗೆ ವಿಶೇಷ ವಸ್ತ್ರಗಳನ್ನು ಧರಿಸಿಯೇ ಹೋಗಬೇಕಾಗಿತ್ತು. ಪ್ಯಾಂಟ್ ಮೇಲೆ ಉದ್ದನೆಯ ಕರಿಕೋಟು, ಮೈಸೂರು ಪೇಟ, ಜರತಾರಿ ಶಲ್ಯ ಇವು ವೇಷ ಭೂಷಣ. ಇವೆಲ್ಲ ಬಾಡಿಗೆಗೆ ಸಿಗುತ್ತಿದ್ದವು. ಸಂಜೆ ೭ರಿಂದ ೯ರವರೆಗೆ ನವರಾತ್ರಿಯಲ್ಲಿ ದರ್ಬಾರ್ ನಡೆಯುತ್ತಿತ್ತು. ಮಹಾರಾಜರ ಸಿಂಹಾಸನಾರೋಹಣ ಆದ ತಕ್ಷಣ ದೀಪಗಳೆಲ್ಲ ಜಗ್ಗನೆ ಹೊತ್ತಿಕೊಳ್ಳುತ್ತಿದ್ದವು. ಅವರು ಸಿಂಹಾಸನದಿಂದ ಏಳುತ್ತಿದ್ದಂತೆ ಆರುತ್ತಿದ್ದವು. ಎರಡು ಘಂಟೆ ರಾಜರ ಎದುರಿನಲ್ಲಿ ರಮಣೀಯವಾದ ಸಂಗೀತ, ನೃತ್ಯ, ಕುಸ್ತಿಗಳು ಏರ್ಪಾಡಾಗಿರುತ್ತಿತ್ತು. ರಾಜರನ್ನು ದೇವರಂತೆ ಕಾಣುತ್ತಿದ್ದ ಜನರು, ಅವರಿಗೆ ಬೆನ್ನು ತೋರಿಸದಂತೆ ಓಡಾಡುತ್ತಿದ್ದರು. ರಾಜರಿಗೆ ದರ್ಬಾರಿಗರು ಏನಾದರು ನಜರು ಒಪ್ಪಿಸುತ್ತಿದ್ದರು. ರಾಜರಿಂದಲೂ ಅವರಿಗೆ ಯಥಾ ಮರ್ಯಾದೆ ದೊರೆಯುತ್ತಿತ್ತು.
![]() |
ದಸರಾ ಮೆರವಣಿಗೆ |
![]() |
ಜಂಬೂ ಸವಾರಿ |
ಜಂಬೂ-ಸವಾರಿ ಮುಗಿದ ನಾಲ್ಕೈದು ದಿನಗಳಲ್ಲೇ ಬೆಟ್ಟದಲ್ಲಿ ರಥೋತ್ಸವ. ಮಹಾರಾಜರು ರಥದಲ್ಲಿ ಕುಳಿತಿರುವ ದೇವರ ಕಡೆ ಮುಖ ಮಾಡಿ ಹಿಮ್ಮುಖವಾಗಿ ಚಲಿಸುತ್ತಿರುವ ಸೊಬಗನ್ನು ನೋಡಿ ಅನುಭವಿಸಿಯೇ ತಿಳಿಯಬೇಕು. ಈಗ ಅಂದಿಗಿಂತ ಹೆಚ್ಚು ಜನ ಸೇರುತ್ತಾರೆ. ವ್ಯಾಪಾರ - ವಹಿವಾಟು ಬಹಳ ಹೆಚ್ಚಾಗಿದೆ. ಅನುಕೂಲಗಳು ಚೆನ್ನಾಗಿವೆ. ಜನಗಳಲ್ಲು ಹಣ ಕಾಸಿನ ಓಡಾಟ ಚೆನ್ನಾಗಿದೆ. ಆದರು ಅಂದಿನ ಮುಗ್ದತೆ, ಸಂಭ್ರಮದ ಕೊರತೆ ಮಾತ್ರ ಕಾಣುತ್ತದೆ!
--
ನಂಜುಂಡಸ್ವಾಮಿ
Image Courtesy: Internet/Google image search