Thursday, 13 March 2014

ಮದುವೆ ಎಂಬ ಮಾತೇ ಚೆಂದ...

ಮನಸ್ಸಿಗೆ ಬಹಳ ಬೇಸರವಾದಾಗ ಯು-ಟ್ಯುಬಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳುವುದು ನನ್ನ ಅಭ್ಯಾಸ. ಹೀಗೆ ಮೊನ್ನೆ ಶ್ರೀ ತ್ಯಾಗರಾಜರ ಕೃತಿ 'ಸೀತಾ ಕಲ್ಯಾಣ ವೈಭೋಗಮೆ' ಆಲಿಸುತ್ತಿದ್ದೆ. ಶಂಕರಾಭರಣ ರಾಗದ ಈ ಕೃತಿಯನ್ನು ಮಂಗಳಂಪಲ್ಲಿ ಬಾಲಮುರುಳಿ ಕೃಷ್ಣ, ಜೇಸುದಾಸ್, ಮಹಾರಾಜಪುರಂ ಸಂತಾನಂರವರ ಧ್ವನಿಯಲ್ಲಿ ಕೇಳುವಾಗ ಆಗುವ ಅನುಭವ ವರ್ಣನಾತೀತ. ದೈವೀಕವಾದ ಈ ಕೃತಿಯನ್ನು ಎಷ್ಟು ಬಾರಿ ಕೇಳಿದರೂ ಮತ್ತೊಮ್ಮೆ ಮಗದೊಮ್ಮೆ ಕೇಳೋಣವೆನಿಸುತ್ತೆ. ಈ ಅನುಭವಕ್ಕೆ ಕೃತಿಗಾರರು ಹಾಗು ಹಾಡುಗಾರರು ಸಮಭಾಜನರು. ಪ್ರತಿ ಗಾಯಕರೂ ಕೇಳುಗರಿಗೆ ವಿಭಿನ್ನ ಅನುಭವ ನೀಡುತ್ತಾರೆ.


ಶ್ರೀ ತ್ಯಾಗರಾಜರು ಶ್ರೀ ರಾಮನ ಪರಮ ಭಕ್ತರು. ಈ ಕೃತಿಯಲ್ಲಿ ಶ್ರೀ ರಾಮರ ಮತ್ತು ಸೀತಾ ದೇವಿಯವರ ಕಲ್ಯಾಣವನ್ನು ಮನದುಂಬಿಕೊಳ್ಳುವುದರ ಜೊತೆಗೆ ಶ್ರೀ ರಾಮರ ಮೇಲಿನ ಪರಮ ಭಕ್ತಿಯ ಅನುಭವವಾಗುತ್ತೆ.


ನನಗೆ ಈ ಕೃತಿಯನ್ನು ಕೇಳಿದಾಗಲೆಲ್ಲ, ನಮ್ಮ ಮನೆಯ, ನೆಂಟರಿಷ್ಟರ ಮನೆಯಲ್ಲಿ ನಡೆದ ಮದುವೆಯ ನೆನಪಾಗುತ್ತೆ. ವಧು ವರರು ಸೀತಾ ರಾಮರ ಹಾಗೆ ಗೋಚರಿಸುತ್ತಾರೆ. ಒಂದು ರೀತಿಯ ಮೃದು ಮಧುರಾನುಭವಾಗುತ್ತೆ. ವಿವಾಹದ ವೈಭವ, ಆದರ ಉಪಚಾರ, ಆಚಾರ, ಮಂತ್ರಘೋಶ, ಸಂತೋಷ, ಕಣ್ಣಮುಂದೆ ಸರಿದು ಹೊಗುತ್ತೆ.


ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ವಿವಾಹಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಈ ಸಮಾರಂಭ ಪತಿ - ಪತ್ನಿಯರ ಬಾಳ ಪಯಣದ ಪ್ರಥಮ ಹಾಗು ಅತಿ ಮುಖ್ಯ ಘಟ್ಟ. ಸಮಾರಂಭಕ್ಕೆ ಆಗಮಿಸಿದ ಸಂಬಂಧಿಗಳಿಗೆ ಅವರವರದೇ ವಿಚಾರ ವಿಮರ್ಶೆಗಳಿದ್ದರೆ, ನವ ವಧು - ವರರಿಗೆ ತಮ್ಮದೇ ನಿರೀಕ್ಷೆ, ಆತಂಕ, ಗೊಂದಲ, ಸಂಭ್ರಮ, ಕನಸುಗಳಿರುತ್ತವೆ. ವಧು - ವರರ ತಂದೆ ತಾಯಿಗಳಿಗೆ ಸಮಾರಂಭದ ಯಶಸ್ಸಿನ, ಮಕ್ಕಳ ಮುಂದಿನ ಜೀವನದ ಬಗ್ಗೆ, ಪರಸ್ಪರ ಹೊಂದಾಣಿಕೆಯ ಬಗ್ಗೆ ಆತಂಕ, ಕುತೂಹಲ ಜೊತೆಗೆ ಖರ್ಚು ವೆಚ್ಚಗಳ ಹೊಂದಾಣಿಕೆಯ ಚಿಂತೆ, ಜವಾಬ್ದಾರಿ ನಿಭಾಯಿಸಿದ ಸಾರ್ಥಕತೆ, ಹೊಸ ಸಂಬಂಧದ ಹರ್ಷ, ಮುಂತಾದ ಭಾವನೆಗಳು ಇರುತ್ತವೆ. ಪರಸ್ಪರ ಹಮ್ಮು - ಬಿಮ್ಮುಗಳ ತೋರ್ಪಡಿಕೆಗೆ ಈ ಸಮಾರಂಭ ಒಂದು ವೇದಿಕೆ. ಹಿಂದೆಲ್ಲಾ ಪರಸ್ಪರ ಪ್ರೀತಿ - ವಿಶ್ವಾಸ, ಊಟ - ಉಪಚಾರಗಳಿಗೆ, ಬಂಧು - ಬಾಂಧವರ ಸಮಾಗಮಕ್ಕೆ ಕಾರಣವಾಗುತ್ತಿದ್ದ ಮದುವೆಗಳು ಇಂದು ನಮ್ಮ ಹೆಚ್ಚುಗಾರಿಕೆಯ ಪ್ರದರ್ಶನದ ತಾಣಗಳಾಗುತ್ತಿರುವುದು ವಿಪರ್ಯಾಸ. ಹಿಂದಿನ ಪವಿತ್ರತೆಯು ಮರೆಯಾಗಿ ಕಾಟಾಚಾರದ ಡೋಂಗಿತನ ಎದ್ದು ಕಾಣುತ್ತೆ.

ಒಂದೊಮ್ಮೆ ಬಾಲ್ಯ ವಿವಾಹ ನಡೆಯುತ್ತಿದ್ದ ಕಾಲದಲ್ಲಿ, ಮಾತಾ - ಪಿತೃಗಳ ಆಶೋತ್ತರಗಳಂತೆ ವಿವಾಹಗಳು ಒಪ್ಪಿಗೆಯಾಗುತ್ತಿದ್ದವು. ಸಾಮಾಜಿಕ ಬದಲಾವಣೆಯಾದಂತೆ ತಮ್ಮತಮ್ಮ ಅನುಕೂಲಕ್ಕೆ ತಕ್ಕಂತೆ ವಧು - ವರರ ಹೊಂದಾಣಿಕೆ ಪ್ರಾರಂಭವಾಯಿತು. ತಮ್ಮ ತಮ್ಮ ಜಾತಿ ಕುಲದಲ್ಲೇ ನಡೆಯುತ್ತಿದ್ದ ಮದುವೆ, ಇಂದು ಅಂತರ ರಾಷ್ಟ್ರೀಯ ಮದುವೆಗಳವರೆಗೂ ಬಂದಿದೆ. ಒಂದು ತಿಂಗಳವರೆಗೆ ನಡೆಯುತ್ತಿದ್ದ ಮದುವೆ ಸಮಾರಂಭ, ಕೆಲವೇ ಘಂಟೆಗಳಿಗೆ ಕುಗ್ಗಿದೆ.

ಗಂಡು ಹೆಣ್ಣಿನ ಸಂಬಂಧಕ್ಕೆ ಸಾಮಾಜಿಕ ಒಪ್ಪಿಗೆಯನ್ನು ದೊರಕಿಸಿ ಕೊಡುವ ಸಲುವಾಗಿ ವಿವಾಹ ಕಾರ್ಯಕ್ರಮ ಜಾರಿಗೆ ಬಂದಿರಬಹುದು. ಇದು ಕಾಲಾನುಕ್ರಮದಲ್ಲಿ ಸಮಾಜದ ಆಶೋತ್ತರಗಳಿಗೆ ತಕ್ಕಂತೆ ಮಾರ್ಪಾಡು ಹೊಂದಿ ಇಂದಿನ ಘಟ್ಟ ತಲುಪಿದೆ. ಮುಂದೆಯೂ ಬಹಳಷ್ಟು ಬದಲಾವಣೆಗಳಾಗಬಹುದು. ಬದಲಾವಣೆಗಳು ಜೀವನ ಮುಖಿ, ಜೀವಂತ ಸಮಾಜದ ಹೆಗ್ಗುರುತು.

ಮದುವೆಯ ಉದ್ದಿಶ್ಯ ಅಶೋತ್ತರಗಳೇನಿರಬಹುದು? ಬಹುಷಃ, ತಮ್ಮ ವೈವಾಹಿಕ ಜೀವನವನ್ನು ಹುಡುಗ ಹುಡುಗಿ ಸುಖ ಸಂತೋಷಗಳಿಂದ ಕಳೆದು, ಜವಾಬ್ದಾರಿಯುತ ಸತ್ಪೀಳಿಗೆಯನ್ನು ಕೊಡುಗೆಯಾಗಿ ಸಮಾಜಕ್ಕೆ ಕೊಡಲಿ ಎಂಬುದಿರಬಹುದು. ಆದರೆ ಇಂದಿನ ಬದುಕಿನ ಜಂಜಾಟಗಳಲ್ಲಿ ನಾವೆಲ್ಲ ನಮ್ಮ ಕರ್ತವ್ಯ ಮರೆತು ಕಳೆದುಹೊಗಿದ್ದೇವೆ. ಸಮಾಜ ಎತ್ತ ನಡೆಯುತ್ತಿದೆ ಎನ್ನುವುದರ ಬಗ್ಗೆ ಒಮ್ಮೆ ಗಮನ ಹರಿಸುವುದು ಒಳಿತು. ತಂದೆ ತಾಯಿಗಳೂ ತಮ್ಮ ಮಕ್ಕಳ ಸಂಸಾರದಲ್ಲಿ ಕೈ ಆಡಿಸದೆ ಅವರ ಜೀವನ ರೂಪಿಸಿಕೊಳ್ಳುವಲ್ಲಿ ಸಕಾರಾತ್ಮಕ ಬೆಂಬಲ ಕೊಡುವುದು ಒಳಿತು. ಅವಶ್ಯಕತೆ ಇರುವಲ್ಲಿ ಸೂಕ್ತ ಸಲಹೆ, ಸೂಚನೆ ಕೊಡುವುದರಲ್ಲಿ ತಪ್ಪಿಲ್ಲ. ಅನಗತ್ಯವಾಗಿ ಮಧ್ಯ ಪ್ರವೇಶಿಸಿ ಅವರಿಗೆ ಗೊಂದಲ ಉಂಟುಮಾಡುವುದು ಅನಪೇಕ್ಷಣೀಯ. ಅವರ ಗುರಿ ಮಕ್ಕಳ ಹಿತವಾಗಿರಬೇಕೇ ವಿನಹ ಸ್ವಪ್ರತಿಷ್ಠೆ ಆಗಬಾರದು. ಹಿರಿಯರು ಮೌಲ್ಯಯುತವಾಗಿದ್ದರೆ ಮುಂದಿನ ಜನಾಂಗ ಸತ್ವಯುತ, ಮೌಲ್ಯಯುತವಾಗಿರುತ್ತವೆ ಎನ್ನುವ ವಿಚಾರ ಮರೆಯುವಂತಿಲ್ಲ.

ಸಂತ ತ್ಯಾಗರಾಜರಿಂದ ಪ್ರಾರಂಭಿಸಿ ನನ್ನ ಮನಸು ಎಲ್ಲೆಲ್ಲಿಗೋ ಎಳೆದೊಯ್ಯುತ್ತಿದೆ. ಮದುವೆಯ ವಿಚಾರವೇ ಹಾಗೆ. ಎಲ್ಲಿಂದ ಎಲ್ಲಿಗೋ ಓಡಾಡಿಸುತ್ತೆ. ಜೀವನದಲ್ಲಿ ಏನೇನೋ ಕಲಿಸುತ್ತೆ. ಜೀವನವನ್ನು ಸ್ವರ್ಗ ಅಥವಾ ನರಕವಾಗಿಸುತ್ತೆ. ಉತ್ಸಾಹ ತುಂಬುತ್ತೆ. ನಿರುತ್ಸಾಹದಲ್ಲಿ ಮುಳುಗಿಸುತ್ತೆ. ಬಡವನನ್ನು ಬಲ್ಲಿದನಾಗಿಸುತ್ತೆ, ಶ್ರೀಮಂತನನ್ನು ದರಿದ್ರನನ್ನಾಗಿಸಿ ತಮಾಶೆ ಮಾಡುತ್ತೆ. ಸಂಬಂಧಗಳನ್ನು ಬೆಸೆಯುತ್ತೆ. ನೆಂಟಸ್ತಿಕೆಯನ್ನು ಮುರಿಯುತ್ತೆ. ಇಂಗ್ಲೀಷಿನಲ್ಲಿ ಮಾತೊಂದಿದೆ 'marriages are made in heaven' ಅಂತ. ಹೆವೆನ್ನೋ ಹೆಲ್ಲೊ ಎರಡನ್ನೂ ಇಲ್ಲೇ ತೋರಿಸುತ್ತೆಂಬ ಮಾತನ್ನಂತೂ ನಾನು ನಂಬುತ್ತೇನೆ.

ಏನೇ ಹೇಳಿದರೂ ಮದುವೆ ಎಂಬ ಮಾತೇ ಚೆಂದ. ಮದುವೆಯ ಸಮಯದ ಸಡಗರ, ಸಂಭ್ರಮ, ಯೋಜನೆಗಳು, ಆತಂಕ, ಆಲೋಚನೆಗಳು, ದುಃಖ, ದುಗುಡ, ದುಮ್ಮಾನಗಳು ಎಲ್ಲರ ಅನುಭವದಲ್ಲೂ ಇರುತ್ತವೆ. ನಂತರ ಬಹಳಷ್ಟು ಸಮಯದವರೆಗೆ ಇವುಗಳ ಮೆಲಕು ಹಾಕುತ್ತಲೇ ಸಮಯ ದೂಡುತ್ತೇವೆ. ಶ್ರೀ ಎಸ್.ಪೀ. ಬಾಲಸುಬ್ರಹ್ಮಣ್ಯರವರು ಹಾಡಿರುವಂತೆ 'ಮದುವೆಯ ಈ ಬಂಧ ಅನುರಾಗದ ಅನುಬಂಧ!' ಅವರಂತೇ ಶುಭಾಶಯ... ಶುಭಾಶಯ, ಮದು ಮಗಳಿಗೂ, ಮದು ಮಗನಿಗೂ ಶುಭಾಶಯ.
 --
ನಂಜುಂಡಸ್ವಾಮಿ

ವೀಡಿಯೊಗಳು: YouTube

No comments:

Post a Comment