Monday, 10 September 2012

ಮೈಸೂರಿನ ಕೆರೆಗಳು

ಮೈಸೂರು ಪಿಂಚಿನಿದಾರರ ಸ್ವರ್ಗ ಎನ್ನುವ ಮಾತಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಎರಡನೇ ದರ್ಜೆ ನಗರವಾಗಿರುವುದರಿಂದ ನಗರ ವಾಸದ ಎಲ್ಲ ಅನುಕೂಲವೂ ಇಲ್ಲಿದೆ. ಜೊತೆಗೆ ಮಹಾರಾಜರ ದೂರದೃಷ್ಟಿಯ ಫಲವಾಗಿ ಇತರ ನಗರಗಳಿಗಿಂತ ಹೆಚ್ಚಿನ ಅನುಕೂಲವೂ ಇಲ್ಲಿದೆ. ವಿಶಾಲವಾದ ರಸ್ತೆಗಳು, ವ್ಯವಸ್ಥಿತ, ಯೋಜನಾಬದ್ದ ಬಡಾವಣೆಗಳು, ನೀರಿನ ವ್ಯವಸ್ಥೆ, ಒಳ ಚರಂಡಿ ವ್ಯವಸ್ಥೆ, ವಿದ್ಯುತ್, ಕಸ ವಿಲೇವಾರಿ, ಎಲ್ಲವೂ ಸಮರ್ಪಕವಾಗಿದ್ದು, ಹಿತಕರ ಜೀವನಕ್ಕೆ ಪೂರಕವಾಗಿವೆ.

ಅಲ್ಲಲ್ಲಿ ಸಣ್ಣ - ಪುಟ್ಟ ಉದ್ಯಾನವನಗಳಿದ್ದು, ಬೆಂಗಳೂರಿನ 'ಉದ್ಯಾನನಗರಿ' ಬಿರುದನ್ನು ಮೈಸೂರು ತನ್ನದಾಗಿಸುಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ ಹಾಗೂ ಲಿಂಗಾಂಬುದಿ ಕೆರೆಗಳು ಮೈಸೂರಿನ ಪ್ರಾಕೃತಿಕ ಸೊಬಗನ್ನು ಹೆಚ್ಚಿಸಲು ನೆರವಾಗಿವೆ. ಈ ಎಲ್ಲ ಕೆರೆಗಳೂ ಅನೇಕಾನೇಕ ಪಕ್ಷಿ ಸಂಕುಲಗಳ ತವರಾಗಿವೆ. ಅತಿ ಅಪರೂಪದ ಪಕ್ಷಿಗಳನ್ನು ಈ ತಾಣಗಳಲ್ಲಿ ನಾವು ಕಾಣಬಹುದು. ವಿಶ್ವದ ಎಲ್ಲೆಡೆಯಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬಂದಿರುವುದನ್ನು ನೋಡಬಹುದು. ಮೈಸೂರಿನ ಹೊರವಲಯದಲ್ಲಿರುವ ಲಿಂಗಾಂಬುದಿ ಅತಿ ಹೆಚ್ಚು ಪಕ್ಷಿಗಳನ್ನು ಆಕರ್ಷಿಸುವ, 217 ಎಕರೆ ವಿಸ್ತಾರದ ಪಕ್ಷಿಧಾಮ ಹಾಗು ರಕ್ಷಿತಾರಣ್ಯ. ಈ ಕೆರೆಯು 1828ರಲ್ಲಿ ರಾಣಿ ಲಿಂಗಾಜಮ್ಮಣ್ಣಿಯವರಿಂದ ನಿರ್ಮಾಣವಾಯಿತೆಂದು ದಾಖಲೆಯಿದೆ. ನಗರದಿಂದ ಸಾಕಷ್ಟು ದೂರದಲ್ಲಿದ್ದ ಈ ಕೆರೆಗೆ ಬಹಳ ವಿಸ್ತಾರವಾದ ಜಲಾನಯನ ಪ್ರದೇಶವಿದ್ದು ನೀರಿನ ಪೂರೈಕೆ ಚೆನ್ನಾಗಿ ಆಗುತ್ತಿತ್ತೆನ್ನುವ ಮಾತಿದೆ. ವಿಸ್ತಾರವಾದ ಈ ಕೆರೆಯಿಂದ ಸುತ್ತ-ಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಪೂರೈಕೆ, ದನ ಕರುಗಳ ನೀರಿನ ಅವಶ್ಯಕತೆ, ವ್ಯವಸಾಯದ ನೀರಿನ ಅವಶ್ಯಕತೆ, ಮೀನುಗಾರಿಕೆ, ಗ್ರಾಮವಾಸಿಗಳ ಸ್ವಚ್ಚತೆ, ಮುಂತಾದ ಅನೇಕ ಅವಶ್ಯಕತೆಗಳ ಪೂರೈಕೆ ಸುಸೂತ್ರವಾಗಿ ನೆರವೇರುತ್ತಿತ್ತು. ಈಗ ನಗರದ ವಿಸ್ತೀರ್ಣ ಕಾರಣವಾಗಿ ಕೆರೆಯ ಸುತ್ತ ಮುತ್ತಲೆಲ್ಲ ಮನೆಗಳಾಗಿ, ಕೆರೆಗೆ ನೀರಿನ ಒರತೆ ಇಲ್ಲದೆ ಜಲ ವಿಸ್ತಾರ ಬಹಳ ಕಡಿಮೆಯಾಗಿದೆ. ಭೇಟಿ ಕೊಡುವ ಪಕ್ಷಿ ಸಂಕುಲವೂ ಕಡಿಮೆಯಾಗಿದೆ.

ಅರಣ್ಯ ಇಲಾಖೆಯ ಮನವಿಯ ಮೇರೆಗೆ 2003ರಲ್ಲಿ ಈ ಪ್ರದೇಶವನ್ನು ರಕ್ಷಿತಾರಣ್ಯವಾಗಿ ಘೋಷಿಸಲಾಗಿದೆ. ಅಂದಿನಿಂದ ಸಂರಕ್ಷಣೆಯ ಕಾರ್ಯ ಎಡೆಬಿಡದೆ ಸಾಗಿ, ಪೂರಕವಾಗಿ ಅರಣ್ಯ ಬೆಳೆಸುವ ಕ್ರಿಯೆ ಪ್ರಾರಂಭವಾಗಿದೆ. ಕಳೆದ ವರ್ಷ ಕೆರೆಯಲ್ಲಿ ಸಾಕಷ್ಟು ಜಲ ಸಂಗ್ರಹವಾಗಿತ್ತು. ಈ ವರ್ಷ ಇದುವರೆಗೂ ನೀರು ಬಂದಿಲ್ಲ. ಬರದ ಕಾರಣ ಗಿಡ, ಮರಗಳೆಲ್ಲ ಒಣಗಿದ್ದು, ಇತ್ತೀಚಿನ ಸ್ವಲ್ಪ ಮಳೆಯಿಂದ ಚೇತರಿಸಿಕೊಂಡಿವೆ. ಅರಣ್ಯ ಇಲಾಖೆ ಪಕ್ಷಿಗಳ ಸಂರಕ್ಷಣೆಗಾಗಿ ಬಿದಿರಿನ ಮೆಳೆಯನ್ನು ಹೆಚ್ಚಾಗಿ ಬೆಳೆಸಿದೆ. ಬೇರೆ ಜಾತಿಯ ಮರ ಗಿಡಗಳೂ ಸಾಕಷ್ಟು ಸಂಖ್ಯೆಯಲ್ಲಿವೆ. ಸಾರ್ವಜನಿಕರಿಗೆ ಇಲ್ಲಿ ವಾಯು ವಿಹಾರದ ಸುಖಾನುಭವಕ್ಕೆ ಆಸ್ಪದ ಮಾಡಿಕೊಡಲಾಗಿದೆ. ಈ ಉದ್ಯಾನದಲ್ಲಿ ಒಂದು ಸುತ್ತು ಕ್ರಮಿಸಿದರೆ 1.5 ಕಿ.ಮೀ ಆಗುತ್ತದೆ.

ಈ ಕೆರೆಯ ಅಂಚಿನಲ್ಲೇ ಶ್ರೀ ಮಹಾಲಿಂಗೇಶ್ವರ ದೇವಾಲಯವಿದೆ. ಅತಿ ಪ್ರಾಚೀನವಾದ ಈ ದೇವಾಲಯಕ್ಕೆ ಇಲ್ಲಿನ ರಾಜರು ಬಹಳ ಭಯ - ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರೆನ್ನುವುದಕ್ಕೆ ಸಾಕ್ಷಿಗಳಿವೆ. ನಿರಂತರ ಪೂಜಾಕಾರ್ಯಗಳಿಗೆ ದಾನ - ದತ್ತಿಗಳನ್ನು ಕೊಟ್ಟಿದ್ದರು. ದೇವಾಲಯದ ಪರಿಸರ ಸುಂದರವಾಗಿದ್ದು, ಚೊಕ್ಕಟವಾಗಿದೆ. ನಿತ್ಯ ಪೂಜಾ ಕಾರ್ಯ ನಡೆಯುತ್ತದೆ.

ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಯನ್ನು ಶ್ರೀ ಮುಮ್ಮಡಿ ಕೃಷ್ಣರಾಜ ವಡೆಯರ್ ಅವರು 1864ರಲ್ಲಿ ಕಟ್ಟಿಸಿದರೆಂಬ ದಾಖಲೆ ಇದೆ. ಸುಮಾರು 58 ಹೆಕ್ಟರ್ ವಿಸ್ತೀರ್ಣ (ಸುಮಾರು 150 ಎಕರೆ) 5 ಕಿ.ಮಿ. ದಡವನ್ನು ಹೊಂದಿರುವ ಈ ಕೆರೆ ಮಾನಸಗಂಗೋತ್ರಿ, ರಂಗಾಯಣ ಹಾಗು ಕೇಂದ್ರ ಆಹಾರ ಸಂಶೋದನಾಲಯದ ಮಧ್ಯದಲ್ಲಿದೆ. ಸುಮಾರು 10000 ಎಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತಿದ್ದ ಹಾಗು ನಗರದ ದಾಹವನ್ನು ಬಹು ಮಟ್ಟಿಗೆ ತಣಿಸುತ್ತಿದ್ದ ಕೆರೆ ಈಗ ಭೂ ಕಬಳಿಕೆಯ ಪರಿಣಾಮವಾಗಿ ಮರಣದ ಅಂಚನ್ನು ತಲುಪಿದೆ. ಕೆರೆಯ ಒಡೆತನ ಈಗ ಮೈಸೂರು ವಿಶ್ವ ವಿದ್ಯಾಲಯಕ್ಕೆ ಸೇರಿದೆ. ಅವರು ಹಾಗು ನಾಗರಿಕ ವೇದಿಕೆ ಕೆರೆಯನ್ನು ಉಳಿಸಿಕೊಳ್ಳುವ ಹರ ಸಾಹಸ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಹತ್ತರಿಂದ ಹದಿನೈದು ಸಾವಿರದವರೆಗೆ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತಿತ್ತೆನ್ನುವುದು ಪಕ್ಷಿ ವೀಕ್ಷಕರ ಅಭಿಪ್ರಾಯ. ಈಚೆಗೆ ಈ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ನೀರಿನ ಗುಣಮಟ್ಟ ಕಡಿಮೆಯಾಗಿರುವುದು, ಕೆರೆಯ ವತ್ತುವರಿಯಾಗಿರುವುದು ಮುಖ್ಯ ಕಾರಣವೆನ್ನಲಾಗುತ್ತಿದೆ. ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕಿನ ಆರ್ಥಿಕ ನೆರೆವಿನಿಂದ ಸುಮಾರು 6-7 ವರುಷಗಳ ಹಿಂದೆ ಕೈಗೊಂಡ ಪುನರುಜ್ಜೀವನ ಕೆಲಸಗಳಿಂದ ಈಗ ಕೆರೆಯ ನೋಟ ಸುಂದರವಾಗಿದೆ. ಪಕ್ಷಿಗಳನ್ನು ನಿಧಾನವಾಗಿ ಆಕರ್ಷಿಸುತ್ತಿದೆ.

ಮೈಸೂರು ಪ್ರಾಣಿ ಸಂಗ್ರಹಾಲಯದ ಒಡೆತನದ ಕಾರಂಜಿ ಕೆರೆ ಪ್ರಾಕೃತಿಕ ಸೊಬಗನ್ನೊಳಗೊಂಡ ಸುಮಾರು 120 ಎಕರೆ ವಿಸ್ತೀರ್ಣವುಳ್ಳ, ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ತಾಣ. ಒಂದು ಕಾಲದಲ್ಲಿ ವಲಸೆ ಹಕ್ಕಿಗಳ ಬೀಡಾಗಿದ್ದ ಈ ಕೆರೆ, ಮನು ಕುಲದ ಬೇಜವಾಬ್ದಾರಿಯಿಂದ ಪಕ್ಷಿಗಳ ತಿರಸ್ಕಾರಕ್ಕೆ ತುತ್ತಾಗಿದೆ! ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕಿನ ಆರ್ಥಿಕ ನೆರವಿನಿಂದ ಕೈಗೊಂಡ ಅಭಿವೃದ್ದಿ ಕಾರ್ಯಗಳಿಂದ ಪರಿಸ್ಥಿತಿ ಸುಧಾರಿಸುತ್ತಿದೆ.

ಮನುಜ ಕುಲದ ದುರಾಸೆ, ಬೇಜವಾಬ್ದಾರಿತನ ನಮ್ಮನ್ನು ಇಂತಹ ಸುಂದರ ತಾಣಗಳಿಂದ ವಂಚಿಸುವುದರಲ್ಲಿ ಸಂಶಯವಿಲ್ಲ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಜನಾಂಗ ನಮ್ಮನ್ನು ಶಪಿಸಬಹುದು.

No comments:

Post a Comment