Tuesday, 3 July 2012

ಮೊಬೈಲ್ ಕಿರಿ-ಕಿರಿ

ನಮ್ಮ ಜನಗಳ ಬೇಜವಾಬ್ದಾರಿಯೋ, ಹುಂಬತನವೋ ಅಥವಾ ಪ್ರತಿಷ್ಠೆಯ ಪ್ರದರ್ಶನವೋ ಗೊತ್ತಾಗುತ್ತಿಲ್ಲ. ಮೊಬೈಲ್ ಇಲ್ಲದೆ ಬದುಕೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಅದರ ಮೇಲೆ ಅವಲಂಬಿತರಾಗಿದ್ದೇವೆ ಎನಿಸುತ್ತಿದೆ. ದ್ವಿಚಕ್ರ ವಾಹನ ಸವಾರಿ ಮಾಡುವಾಗಲೂ ಮೊಬೈಲಿನಲ್ಲಿ ಮಾತಾಡುತ್ತಲೇ ಚಲಿಸುವಷ್ಟು ಬ್ಯುಸಿ. ವಾಹನದಲ್ಲಿ ಹೆಂಡತಿ, ಮಗು/ಮಕ್ಕಳು ಕುಳಿತಿದ್ದರೂ ನಮಗೆ ಅದರ ಪರವಾಹ ಇಲ್ಲ. ಕತ್ತನ್ನು ಒಂದು ಕಡೆಗೆ ಓಲಿಸಿಕೊಂಡು ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ವಾಹನದ ಹ್ಯಾಂಡಲ್ ಹಿಡಿದು ವಾಹನ ಓಡಿಸುವ ಪರಿ ನಮ್ಮ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ!

ಯಾವುದೇ ವಾಹನ ನಡೆಸುವಾಗ ಮೊಬೈಲ್ ಸಂಭಾಷಣೆ ಎಲ್ಲ ದೇಶಗಳಲ್ಲಿದ್ದಂತೆ ನಮ್ಮಲ್ಲೂ ನಿಷಿದ್ದ. ಕಾನೂನು ಮಾಡುವವರಿಗೆ ನಾವೆಷ್ಟು ಬ್ಯುಸಿ ಎಂದು ಏನು ಗೊತ್ತು? ಕಾನೂನನ್ನು ಪಾಲಿಸಬೇಕೆಂದು ಎಲ್ಲಿದೆ ನಿಯಮ. ಮೊಬೈಲ್ ಸಂಭಾಷಣೆಯೊಂದಿಗೆ ವಾಹನ ಚಲಿಸುವ ಗಮ್ಮತ್ತು ಇವರ್ಯಾರಿಗೆ ಗೊತ್ತು? ವಾಹನದಲ್ಲಿ ಚಲಿಸುವಾಗ ಕರೆ ಬಂದರೆ ಪಕ್ಕದಲ್ಲಿ ವಾಹನ ನಿಲ್ಲಿಸಿ ಕರೆ ಸ್ವೀಕರಿಸುವ ಪುರುಸೊತ್ತು ಯಾರಿಗಿದೆ? ಕರೆ ಬಂದದ್ದು ಫೋನಿನಲ್ಲಿ ನಮೂದಾಗಿದ್ದರೂ ಮತ್ತೆ ನಾವು ಕರೆ ಮಾಡುವವರೆಗೆ ಕಾಯುವ ತಾಳ್ಮೆ ಕರೆ ಮಾಡಿದವರಿಗೆ ಇರುತ್ತದೆಯೇ? ಹಾಗಾಗಿ ಚಲಿಸುವಾಗಲೇ ಮಾತನಾಡುವ ಅಭ್ಯಾಸ ನಮಗಾಗಿದೆ. ಎಲ್ಲರೂ ಹೀಗೆ ಮಾಡುತ್ತಿರುವುದರಿಂದ ನಾವು ಮಾಡುವುದು ತಪ್ಪು ಅಥವಾ ಅಪರಾಧ ಎಂದು ಎನಿಸುವುದೇ ಇಲ್ಲ! ನನ್ನಂಥ ನಾಲ್ಕಾರು ತಲೆ ಕೆಟ್ಟವರಿಗೆ ಇದನ್ನು ಕಂಡಾಗ ಕೋಪ ಬರಬಹುದು. ಇದರಿಂದೇನು? ನಾವು ಮಾತಾಡುತ್ತಲೇ ಇರುತ್ತೇವೆ. ಎಲ್ಲ ಮೊಬೈಲ್ ಕಂಪನಿಗಳೂ ಹೆಚ್ಹು ಹೆಚ್ಚು ಮಾತಾಡಿ ಎಂದು ಹುರಿದುಂಬಿಸುತ್ತಿಲ್ಲವೇ ನಾವು ಅವರ ಮಾತು ಕೇಳದೆ ಅವರಿಗೆ ಬೇಜಾರು ಮಾಡುವುದು ನ್ಯಾಯವೇ?

ಮೊನ್ನೆ ನಾನು ರಸ್ತೆಯಲ್ಲಿ ನಡೆದು ಹೋಗುವಾಗ ಕುತೂಹಲಕ್ಕಾಗಿ ನನ್ನ ಎದಿರು ಬದಿಯಿಂದ ಬಂದ ದ್ವಿಚಕ್ರ ವಾಹನಗಳಲ್ಲಿ ಮೊಬೈಲ್ ಸಂಭಾಷಣೆ ಮಾಡುತ್ತ ವಾಹನ ನಡೆಸುತ್ತಿದ್ದವರ ಎಣಿಕೆ ಮಾಡಿದೆ. ನಾನು ಸುಮಾರು 3 ಕಿ.ಮೀ (one-way) ಕ್ರಮಿಸಿದೆ. ದಯಮಾಡಿ ನನ್ನನ್ನು ನಂಬಿ. ಎದುರಿನಿಂದ ಬಂದ 180 ದ್ವಿಚಕ್ರ ವಾಹನಗಳಲ್ಲಿ 164 ಸವಾರರು ಮೊಬೈಲ್ ಸಂವಾದದಲ್ಲಿ ತೊಡಗಿದ್ದರು! ದ್ವಿಚಕ್ರ ವಾಹನವಲ್ಲದೆ ಬೇರೆ ವಾಹನಗಳಲ್ಲು ಮೊಬೈಲ್ ಸಂಭಾಷಣೆಯ ಚಾಲಕರಿದ್ದರು. ನಾನು ದ್ವಿಚಕ್ರ ಚಾಲಕರನ್ನು ಗಮನಿಸುತ್ತಿದ್ದುದರಿಂದ ಬೇರೆ ವಾಹನಗಳ ಲೆಕ್ಕ ಮಾಡಲಾಗಲಿಲ್ಲ.

ಮೈಸೂರಿನಿಂದ ಬೆಂಗಳೂರಿಗೆ ಹೋಗುವಾಗ ನೂರಾರು ದ್ವಿಚಕ್ರ ವಾಹನ ಚಾಲಕರು ಮೊಬೈಲಿನಲ್ಲಿ ಸಂಭಾಷಿಸುತ್ತಲೇ ತೆರಳುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಅವರಿಗೆ ಹೈ-ವೇನಲ್ಲಿ ಚಲಿಸುತ್ತಿದ್ದೇವೆಂಬ ಪರಿಜ್ಞಾನವೇ ಇರುವುದಿಲ್ಲ.

ಕಳೆದ ವಾರ ಆರ್.ಟಿ.ಓ ಕಚೇರಿಗೆ ಹೋಗಿದ್ದೆ. ಅಲ್ಲಿನ ವಿಚಾರಣೆಯ ಕೌಂಟರಿನಲ್ಲಿ ಕುಳಿತಿದ್ದ ಅಧಿಕಾರಿಯನ್ನು ಮಾತನಾಡಿಸಲು ನನಗೆ 12 ನಿಮಿಷ ಬೇಕಾಯಿತು. ಆ ಅಧಿಕಾರಿ ಮೊಬೈಲ್ ಸಂವಾದದಲ್ಲಿ ಬ್ಯುಸಿ ಆಗಿದ್ದರು ಎಂದು ಹೇಳುವ ಅವಶ್ಯಕತೆ ಇಲ್ಲ . ಇದು ಎಲ್ಲ ಸರಕಾರೀ ಕಛೇರಿಗಳ ದುಃಸ್ಥಿತಿ. ಸಂದರ್ಶಕರನ್ನು ಕೇಳುವವರೇ ಇಲ್ಲ. ಆದರೂ ಒಂದು ಸಮಾಧಾನ. ಸರಕಾರೀ ಫೋನುಗಳ ದುರ್ಬಳಕೆ ಕಡಿಮೆಯಾಗಿರಬಹುದೆಂದು!

ಮೊಬೈಲ್ ಸಂಭಾಷಣೆಯಲ್ಲಿ ಮೆಲು ಧ್ವನಿಯಲ್ಲಿ ಮಾತನಾಡಿದರೆ ಆ ಬದಿಯವರಿಗೆ ಕೇಳುವುದಿಲ್ಲವೆಂಬ ಸಂದೇಹ ನಮಗೆ. ಹಾಗಾಗಿ ಜೋರು ಧ್ವನಿಯಲ್ಲೇ ಮಾತನಾಡುವ ರೂಡಿ ನಮಗಾಗಿದೆ. ಇದರಿಂದ ಬೇರೆಯವರಿಗೆ ಮುಜುಗರವಾದರೆ ನಮಗೇನು? ನಮ್ಮ ಸಂಗತಿ ಇತರರಿಗೆ ಗೊತ್ತಾದರೆ ಏನಂತೆ? ನಾವಂತೂ ಮಾತನಾಡುವವರೇ. ರಾತ್ರಿಯ ಸ್ಲೀಪರ್ ರೈಲಿನಲ್ಲೂ ಗಂಟೆಗಟ್ಟಲೆ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಗಟ್ಟಿಗರು ನಾವು! ಬೆಳಗಿನ ವೇಳೆ ವಾಕ್ ಮಾಡುವಾಗ ಪಾರ್ಕಿನಲ್ಲೂ ನಮಗೆ ಮೊಬೈಲಿನಲ್ಲಿ ಗಟ್ಟಿ ದ್ವನಿಯಲ್ಲಿ ಮಾತನಾಡುವ ಹವ್ಯಾಸ.

ಈಗಂತೂ ನೂರಾರು ಕಂಪನಿಗಳಿಂದ ಬಗೆ-ಬಗೆಯ ಹ್ಯಾಂಡ್ ಸೆಟ್ಟುಗಳು ಬಂದಿವೆ. ಇವು ನಮ್ಮಪ್ರತಿಷ್ಠೆಯ ಪ್ರತೀಕವೂ ಹೌದು. ಹ್ಯಾಂಡ್ ಸೆಟ್ಟಿನಿಂದ  ವ್ಯಕ್ತಿಯ ಯೋಗ್ಯತೆ ಅಳೆಯಬಹುದೆನ್ನುವ ತೀರ್ಮಾನಕ್ಕೆ ಬಂದಿದ್ದೇವೆ. ಹಿಂದೆಲ್ಲ ಒಂದೊಂದು ಮೊಬೈಲ್ ಇಟ್ಟುಕೊಳ್ಳುವುದೇ ದುಸ್ತರವಾಗಿತ್ತು. ಈಗ ಕನಿಷ್ಠ ಎರಡು ಹೊಂದಿರುವುದು ಸಾಮಾನ್ಯವಾಗಿದೆ.

ಮೊಬೈಲಿನಿಂದ ಪೇಚಿಗೆ ಸಿಲುಕಿರುವ ಪ್ರಸಂಗಗಳು ಬಹಳಷ್ಟಿವೆ. ಹಾಗೆಯೇ ಅದರಿಂದ ಬಚಾವಾದ ಸಂಗತಿಗಳು ಸಾಕಷ್ಟಿವೆ. ಮೊನ್ನೆ ನಾನು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾಗ ನನ್ನ ಪಕ್ಕದಲ್ಲಿದ್ದ ಪ್ರಯಾಣಿಕ ಅವರ ಬಾಸಿಗೆ ನಾವು ಮಂಡ್ಯದಲ್ಲಿದ್ದಾಗ, ಬೆಂಗಳೂರಿನ ಮಜೆಸ್ಟಿಕ್-ನಲ್ಲಿರುವುದಾಗಿಯೂ, ಅಲ್ಲಿಂದ ನೇರವಾಗಿ ಅವರ ಗ್ರಾಹಕರನ್ನು ಭೇಟಿಮಾಡಿ ಕಛೇರಿಗೆ ಬರುವುದಾಗಿ ತಿಳಿಸುತ್ತಿದ್ದ. ನಮ್ಮ ಬ್ಯಾಂಕಿನಲ್ಲಿ ಕಂಪ್ಯೂಟರ್ ಬಳಕೆ ಪ್ರಾರಂಭವಾದ ಹೊಸತರಲ್ಲಿ ಕೆಲವು ಅಧಿಕಾರಿಗಳಿಗೆ ವಿಶೇಷ ತರಬೇತಿ ಕೊಟ್ಟು ಅವರಿಗೆ ಮೊಬೈಲ್ ಹ್ಯಾಂಡ್ ಸೆಟ್ ಕೊಡಿಸಿದ್ದರು, ಶಾಖೆಗಳವರು ತೊಂದರೆಯಾದಾಗ ಸಂಪರ್ಕಿಸಲೆಂದು. ನಮ್ಮ ಯಾವ ತುರ್ತು ಸಮಯದಲ್ಲೂ ಆ ಯಾವ ನಂಬರ್ರು ಸಿಗುತ್ತಲೇ ಇರಲಿಲ್ಲ!

ನನ್ನ ಸಹೋದ್ಯೋಗಿಯೊಬ್ಬರು ಪ್ರೀಮಿಯರ್ ಸ್ಟುಡಿಯೋ ಹತ್ತಿರ ಮೊಬೈಲಿನಲ್ಲಿ ಮಾತನಾಡುತ್ತ ರಸ್ತೆ ದಾಟುವಾಗ ಬಸ್ ಒಂದು ಅಪ್ಪಳಿಸಿ ರಸ್ತೆಯಲ್ಲೇ ಅವರು ಕೊನೆ ಉಸಿರು ಎಳೆದದ್ದು ವಿಷಾದದ ಸಂಗತಿ.

ಇಷ್ಟೆಲ್ಲಾ ಹೇಳಿದಮೇಲೆ, ಮೊಬೈಲ್ ಫೋನ್ ಬಗ್ಗೆ ನನಗೆ ತಿರಸ್ಕಾರ ಇದೆ ಎಂದು ತಿಳಿಯಬೇಡಿ! ಅದರ ಅನೇಕ ಸದುಪಯೋಗಗಳು ನನಗೆ ತಿಳಿದಿದೆ. ಆಪತ್ಬಾಂದವ, ಅನಾಥ ರಕ್ಷಕನೆನ್ನುವುದು ಗೊತ್ತಿದೆ. ನನ್ನ ಕಳವಳ ಅದರ ದುರುಪಯೋಗದ (abuse) ಬಗ್ಗೆ ಮಾತ್ರ.

ಸಧ್ಯ ನನ್ನ ಮೊಬೈಲ್ ರಿಂಗ್ ಆಗುತ್ತಿದೆ. ಕರೆ ಸ್ವೀಕರಿಸಿ ಮುಂದಿನ ಬ್ಲಾಗ್ ನಲ್ಲಿ ಭೇಟಿಯಾಗುತ್ತೇನೆ. ನಮಸ್ಕಾರ.

No comments:

Post a Comment