ಒಂದು ಕಡೆ ಹಗರಣಗಳ ಪರ ನಿಂತಿರುವ ರಾಜಕಾರಣಿಗಳು, ಮತ್ತೊಂದೆಡೆ ಅವರ ವಿರುದ್ದ ಹೋರಾಡುತ್ತಿರುವ ನಾಗರಿಕರು, ನಡುವೆ ಏನಾದರೆ ನಮಗೇನು ಎಂದು ಬದುಕುತ್ತಿರುವ ಶ್ರೀಸಾಮಾನ್ಯರು, ಇಂಥಹ ದಯನೀಯ ಸ್ಥಿತಿಯಲ್ಲಿ ಸಿಕ್ಕಿದಷ್ಟು ದೋಚುವ ವ್ಯಾಪಾರಿಗಳು, ಅಧಿಕಾರಿಗಳು, ಗುತ್ತಿಗೆದಾರರುಗಳನ್ನು ನೋಡಿದಾಗ ನಮ್ಮ ಭವಿಷ್ಯದ ಬಗ್ಗೆ ಬಹಳ ಗಾಬರಿ ಮೂಡುವುದು ಸಹಜ.
![]() |
ಚಾಮುಂಡಿ ಬೆಟ್ಟ |
ಮೈಸೂರು ಪ್ರಸಿದ್ದ ಪ್ರವಾಸಿ ತಾಣ. ದೋಚುವುದು, ವಂಚಿಸುವುದು, ಮುಂತಾದ ಅಕ್ರಮ ಚಟುವಟಿಕೆಗಳಿಗೆ ಮೈಸೂರಿಗಿಂತ ಪ್ರಶಸ್ತ ಸ್ಥಳ ಮತ್ತೆಲ್ಲಿ ಸಿಕ್ಕೀತು? ಚಾಮುಂಡಿಬೆಟ್ಟ, ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ ಮುಂತಾದೆಡೆಗೆ ಯಾವಾಗಲೂ ಪ್ರವಾಸಿಗಳ ನೂಕುನುಗ್ಗಲೇ ಸರಿ. ಇಂತಹ ತಾಣಗಳಲ್ಲಿ ಪ್ರವಾಸಿಗರ ಅವಶ್ಯಕತೆಗಳೂ ಬಹಳಷ್ಟಿರುತ್ತವೆ. ಅವುಗಳನ್ನು ಪೂರೈಸಿ ಹಣ ದೋಚುವ ವ್ಯಾಪಾರಿಗಳೂ ಬಹಳಷ್ಟಿದ್ದಾರೆ. ದೋಚುವ ವ್ಯಾಪಾರಿಗಳಿಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕಣ್ಮುಚ್ಚಿ ತೆಪ್ಪಗಿದ್ದಾರೆ.
ಇತ್ತೀಚಿಗೆ, ನನ್ನ ಮೊಮ್ಮಕ್ಕಳೊಂದಿಗೆ ಕೆ.ಆರ್.ಎಸ್- ಚಾಮುಂಡಿ ಬೆಟ್ಟಕ್ಕೆ ಹೋಗುವ ಸಂದರ್ಭ ಬಂದಿತ್ತು. ಖುಷಿಯಿಂದ ನಾವೆಲ್ಲರೂ ಹೊರಟೆವು. ಮೈಸೂರಿನ ರಸ್ತೆಗಳು ಚೆನ್ನಾಗಿರುವುದರಿಂದ ಪ್ರಯಾಣವೇನೋ ಸುಖಕರವಾಗಿತ್ತು. ಬೆಟ್ಟದಮೇಲೆ, ನನ್ನ ಮೊಮ್ಮಗ, ಸಾಫ್ಟ್ ಡ್ರಿಂಕ್ (ಮಾಜ) ಬೇಕೆಂದ. ಅವನೊಂದಿಗೆ ನಾವೆಲ್ಲರೂ ಅದನ್ನು ಖರೀದಿಸಿ ಕುಡಿದೆವು. ಹಣ ಕೊಡುವಾಗ ದೊಡ್ಡ ಶಾಕ್ ನನಗೆ ಕಾದಿತ್ತು. ಪ್ರತಿ ಬಾಟಲ್ ಬೆಲೆ ಎಂ.ಆರ್.ಪಿ ಪ್ರಕಾರ ರೂ 12/- ಇತ್ತು. ಆದರೆ ಅಂಗಡಿಯವನು ರೂ 15/- ಸುಲಿಗೆ ಮಾಡಿದ. ಹೆಚ್ಚು ರೊಕ್ಕ ಏತಕ್ಕಾಗಿ ಎನ್ನುವುದಕ್ಕೆ ಅವನಲ್ಲಿ ಉತ್ತರವಿರಲಿಲ್ಲ. ಬೇರೆ ಪ್ರವಾಸಿಗಳಿಗೆ ಈ ಅನ್ಯಾಯದ ಕಡೆ ಗಮನ ಹರಿಸುವಷ್ಟು ಪುರುಸೊತ್ತು ಇರಲಿಲ್ಲ. ಮಕ್ಕಳು ಕೇಳಿದಾಗ ಇಲ್ಲವೆನ್ನುವ ಸ್ವಭಾವ ಯಾರಲ್ಲೂ ಇರುವುದಿಲ್ಲ. ಅಲ್ಲಿ ಒಂದು ಸೀನ್ ಕ್ರಿಯೇಟ್ ಮಾಡಲು ಇಷ್ಟವಿಲ್ಲದೆ ಅವನು ಕೇಳಿದಷ್ಟು ಹಣ ತೆತ್ತು ಅಲ್ಲಿಂದ ಹೊರಡಬೇಕಾಯಿತು. ಅಲ್ಲಿ ಬೇರೆ ಅಂಗಡಿಗಳಲ್ಲಿ ವಿಚಾರಿಸಿದಾಗ ಎಲ್ಲ ಅಂಗಡಿಗಳಲ್ಲೂ ರೂ 12/- ರ ಪೇಯ ರೂ 15/- ಕ್ಕೆ ಮಾರಾಟವಾಗುತ್ತಿರುವ ವಿಷಯ ತಿಳಿಯಿತು.
![]() |
ಬೃಂದಾವನ, ಕೆ.ಆರ್.ಎಸ್ |
ಮರುದಿನದ ಕೆ.ಆರ್.ಎಸ್ ಭೇಟಿಯೂ ಇಂತಹದೆ ಕಹಿ ಅನುಭವವನ್ನು ನೀಡಿತು. ವಿಚಿತ್ರವೆಂದರೆ, ಇಲ್ಲಿ ಅಂಗಡಿಗಳ ಮೇಲೆಲ್ಲಾ ಕೆ.ಎಸ್.ಟೀ.ಡಿ.ಸೀ ಶಾಪ್ ಎಂಬ ಫಲಕ ಬೇರೆ! ಧರೆಯೇ ಹತ್ತಿ ಉರಿಯುತ್ತಿರುವಾಗ ಓಡುವುದೆಲ್ಲಿಗೆ?
ಈ ಎರಡೂ ಕಡೆ ಬೇರೆ ತಿಂಡಿ-ತಿನಿಸುಗಳೂ ಕೂಡ ಎಂ.ಆರ್.ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ವಿಷಯ ನನ್ನ ಗಮನಕ್ಕೆ ಬಂತು.
ಸರಾಸರಿ ದಿನಕ್ಕೆ 60000 ಜನ ಈ ಸ್ಥಳಗಳಿಗೆ ಭೇಟಿ ಕೊಡುತ್ತಾರೆಂದುಕೊಂಡರೆ (ವಿಶೇಷ ದಿನಗಳಲ್ಲಿ ಸಂಖ್ಯೆ 2,00,000 ದಾಟಿದ್ದಿದೆ), ಅವರಲ್ಲಿ 30000 ಜನ ಇಂಥ ಖರೀದಿ ಮಾಡಿದರೆ ಒಂದು ಸಾಮಗ್ರಿಯಿಂದ 90000 ಸುಲಿಗೆ. ಪ್ರವಾಸಿಗಳು ಸಾಮಾನ್ಯವಾಗಿ ಇಂತಾ ಲೆಕ್ಕಾಚಾರ ಹಾಕುತ್ತ ಖರೀದಿಸುವುದನ್ನು ಬಿಡುವುದಿಲ್ಲ. ತಿಂಡಿ-ತಿನಿಸುಗಳ ಖರೀದಿಯೂ ಭರ್ಜರಿಯಾಗೇ ನಡೆಯುತ್ತದೆ. ಹಾಗಾಗಿ ಈ ಯಾವುದೇ ಸ್ಥಳಗಳಲ್ಲೂ ಪ್ರತಿ ದಿನದ ಸುಲಿಗೆ ಕನಿಷ್ಠ ಮೂರರಿಂದ ನಾಲ್ಕು ಲಕ್ಷವೆಂದು ಸುಲಭವಾಗಿ ಲೆಕ್ಕ ಹಾಕಬಹುದು. ಇದು ಅವರ ಲಾಭವನ್ನು ಹೊರತುಪಡಿಸಿ.
ಸಂಬಂಧ ಪಟ್ಟ ಇಲಾಖೆಯ ಉದ್ಯೋಗಿಗಳಾರೂ ಈ ಯಾವುದೇ ಪ್ರವಾಸಕ್ಕೆ ಹೋಗಿಲ್ಲ, ಅಥವಾ ಹೋಗಿದ್ದರೂ ಇಂಥ ವಿಷಯ ಅವರ ಗಮನಕ್ಕೆ ಬಂದಿಲ್ಲ ಎಂದರೆ ನಂಬಲು ಸ್ವಲ್ಪ ಕಷ್ಟವಾಗುತ್ತೆ. ವಾಣಿಜ್ಯ ಇಲಾಖೆ, ತೂಕ ಮತ್ತು ಅಳತೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಇಂತಹ ಅನ್ಯಾಯಗಳ ನಿಯಂತ್ರಣ ಮಾಡಬೇಕಾದ ಜವಾಬ್ದಾರಿಯಿಂದ ಹೇಗೆ ನುಣಿಚಿಕೊಂಡಿವೆ? ಈ ಸುಲಿಗೆಯಲ್ಲಿ ಅವರ ಪಾಲೂ ಇಲ್ಲದೆ ಇದು ಸಾಧ್ಯವಿಲ್ಲವೆಂದೆನಿಸುತ್ತೆ.
ಪ್ರವಾಸಿಗರಿಗಾಗಿ ಎಷ್ಟೆಲ್ಲ ಸೌಲಭ್ಯ ಕಲ್ಪಿಸುತ್ತಿರುವ ಸರಕಾರ ಇಂತಹ ಸುಲಿಗೆ ತಪ್ಪಿಸದಿದ್ದರೆ, ಮಾಡಿದ್ದೆಲ್ಲ ವ್ಯರ್ಥ. ಪ್ರವಾಸದ ನೆನಪು ದೀರ್ಘ ಕಾಲ ಮನಸ್ಸಿನಲ್ಲಿ ಉಳಿಯುವಂಥದ್ದು. ಅನುಭವ ಮಧುರ, ಸುಖ, ಉಲ್ಲಾಸಕರವಾಗಿದ್ದರೆ ಮುಂದಿನ ಪ್ರವಾಸದ ತನಕ ಮನಸ್ಸಿನಲ್ಲಿ ಮೆಲುಕು ಹಾಕುತ್ತಿರುತ್ತೇವೆ. ಕಹಿ ಅನುಭವವಾದರೆ ಮತ್ತೆ ಪ್ರವಾಸ ಹೊರಡುವ ಮುನ್ನ ಇನ್ನೊಮ್ಮೆ ಯೋಚಿಸ ಬೇಕೆನಿಸುತ್ತೆ. ಪ್ರವಾಸೋದ್ಯಮ ಯಾವುದೇ ದೇಶದ/ರಾಜ್ಯದ ಆರ್ಥಿಕ ಬೆನ್ನೆಲುಬಾಗುವ ಎಲ್ಲ ಸಾಧ್ಯತೆಗಳನ್ನೂ ಒಳಗೊಂಡಿದೆ. ಪ್ರವಾಸೋದ್ಯಮವೇ ಮುಖ್ಯವಾಗಿರುವ ಯಾವುದೇ ವಿದೇಶದ ಪ್ರವಾಸದಲ್ಲೂ ನಾವು ಪ್ರವಾಸಿಗರನ್ನು ದೇವರಂತೆ ಕಾಣುವ ಸಂಪ್ರದಾಯವನ್ನು ನೋಡಿದ್ದೇವೆ. ಅಲ್ಲಿನ ಸರಕಾರಗಳು ಪ್ರವಾಸಿಗಳ ಅನುಕೂಲಕ್ಕೆ ಯಾವ ಮಟ್ಟಕ್ಕೆ ಹೋಗಲೂ ಸಿದ್ದವಾಗಿರುತ್ತವೆ.
ನಮ್ಮ ದೇಶದಲ್ಲಿ ಶ್ರೀ ಸಾಮಾನ್ಯ ನಾಗರೀಕ ಪ್ರಭುವಿಗೆ ಬೆಲೆ ಬರುವುದು ಯಾವಾಗಲೋ?
Photo courtesy: Google