Sunday, 18 September 2011

ಎಲ್ಲಿ ಹೋದವೋ ಆ ದಿನಗಳು..

ಸಕಲೇಶಪುರ ಕಾಫಿ, ಏಲಕ್ಕಿ, ಬತ್ತದ ಬೆಳೆಗೆ ಹೆಸರುವಾಸಿ. ಸುಂದರ ಬೆಟ್ಟ ಗುಡ್ಡಗಳ, ಕಾಫಿ ತೋಟಗಳ, ನಡುವೆ ಇರುವ ನಮ್ಮ ಊರು ಸಕಲೇಶಪುರ. ಮಲೆನಾಡು ಪ್ರದೇಶವಾದ್ದರಿಂದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೂ ಹೌದು. ನಮ್ಮಲ್ಲಿನ ಮಳೆ ಯುಗಾದಿಯಂದೇ ಸಾಮಾನ್ಯವಾಗಿ ಪ್ರಾರಂಭವಾಗುತ್ತದೆ. ಆ ಮಳೆಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಅದನ್ನು ಬ್ಲೋಸ್ಸೊಂ ಶೋವೆರ್ಸ್ (Blossom Showers) ಎಂದೇ ಕರೆಯುತ್ತಾರೆ. ಈ ಮಳೆ ಎರಡು-ಮೂರು ದಿನ ಬರುತ್ತದೆ ಆದರೆ ಮಳೆಗಾಲದ ಮಳೆಯಂತೆ ಸತತವಾಗಿ ಸುರಿಯುವುದಿಲ್ಲ. ಈ ಮಳೆಯ ನಂತರ ಹತ್ತು-ಹನ್ನೆರಡು ದಿನದಲ್ಲಿ ಕಾಫಿ ಮೊಗ್ಗಾಗಿ ಹೂ ಅರಳಲು ತೊಡಗುತ್ತದೆ. ಈ ಕ್ರಿಯೆಗೂ ಪ್ರಕೃತಿ ಸಹಕಾರ ನೀಡಿ ಪುನಃ ಮಳೆ ಸುರಿಸುತ್ತದೆ. ಇದನ್ನು ಬ್ಯಾಕಿಂಗ್ ಶೋವೆರ್ಸ್ (Backing Showers) ಎನ್ನುತ್ತಾರೆ. ನನ್ನ ಬಾಲ್ಯದಲ್ಲಿ ಈ ಎರಡೂ ಕ್ರಿಯೆಗಳು ತಪ್ಪದೆ ನಡೆಯುತ್ತಿದ್ದವು. ಕಾಫಿ ಬೆಳೆಗಾರರು, ಬ್ಯಾಂಕಿನವರು ಈ ಮಳೆಗಳ ಆಧಾರದ ಮೇಲೆ ಹಾಗು ಕಾಫಿ ಹೂವಿನ ಅರಳುವಿಕೆಯ ಮೇಲೆ ಫಸಲಿನ ಅಂದಾಜು ಮಾಡುತ್ತಿದ್ದರು.
ಸಕಲೇಶಪುರ



ಬೇಸಿಗೆಯಲ್ಲಿ ಬರುವ ಈ ಮಳೆ ಮಣ್ಣಿನ ಮೇಲೆ ಸುರಿದಾಗ ಪಸರಿಸುವ ಕಂಪನ್ನು ಸವಿಯಲು ನಾವೆಲ್ಲ ಪರಿತಪಿಸುತ್ತಿದ್ದೆವು. ವಾತಾವರಣವನ್ನು ತಂಪು ಗೊಳಿಸುವುದಲ್ಲದೆ ಗಿಡ ಗಂಟಿಗಳ ಧೂಳನ್ನು ತೆಗೆದು ಪ್ರಕೃತಿಗೆ ಒಂದು ಹೊಸ ಬಗೆಯ ಸೊಬಗನ್ನು ಈ ಮಳೆ ತರುತ್ತಿತ್ತು. ಕಾಫಿ ಹೂವಾದ ನಂತರವಂತೂ ಆ ಪರಿಮಳ, ಜೊತೆಯಲ್ಲಿ ತೋಟದಲ್ಲಿರುವ ಇತರ ಗಿಡ ಮರಗಳ ಕಂಪು ಸವಿಯುವಾಗ ಸ್ವರ್ಗ ಸುಖವೆಂದರೆ ಇದೆ ಇರಬಹುದೇನೋ ಎನ್ನಿಸುತ್ತಿತ್ತು! 

ಕಾಫಿ ತೋಟದಲ್ಲಿ ಗಿಡಗಳ ನೆರಳಿಗಾಗಿ ಅನೇಕಬಗೆಯ ವೈವಿದ್ಯಮಯ ಮರಗಳಿರುತ್ತವೆ.ಸಾಮಾನ್ಯವಾಗಿ ತೋಟದಲ್ಲಿ ಉಪ ಬೆಳೆಯಾಗಿ ಕರಿಮೆಣಸು ಬೆಳೆಯಲಾಗುತ್ತೆ. ಮೆಣಸಿನ ಬಳ್ಳಿಯನ್ನು ನೆರಳು ಒದಗಿಸುವ ಮರಗಳಿಗೆ ಹಬ್ಬಿಸಿರುತ್ತಾರೆ. ಈಗೀಗ ಕೋಕೋ ಬೆಳೆ ಬೆಳೆಯಲಾಗುತ್ತಿದೆ. ನೀರಿನ ಒರತೆ/ಹರಿವು ಹೆಚ್ಚಾಗಿರುವ ಕಡೆ ಏಲಕ್ಕಿ ಬೆಳೆಯುತ್ತಾರೆ. ಇದಲ್ಲದೆ ಕಿತ್ತಳೆ, ಮೂಸಂಬಿ, ನಿಂಬೆ ಮುಂತಾದ ಹಣ್ಣಿನ ಗಿಡಗಳು ಸಾಮಾನ್ಯ. ಹಾಗಾಗಿ ಫಲಭರಿತ ತೋಟಕ್ಕೆ ಪ್ರವೇಶಮಾಡುವುದೇ ಒಂದು ಹಿತಕರ ಅನುಭವ. ಅಲ್ಲಿನ ಪರಿಮಳ, ಕಂಪನ್ನು ಅನುಭವಿಸುವುದೇ ಒಂದು ಸುಖ.

ಅಂದಿನ ದಿನಗಳಲ್ಲಿ ಕಾಫಿ ಮಾರಾಟ ಕಾಫಿ ಬೋರ್ಡಿನ ನಿಯಂತ್ರಣದಲ್ಲಿತ್ತು. ಅದರಿಂದ ಬೆಳೆಗಾರರು ಸಾಕಷ್ಟು ಕಿರಿಕಿರಿಯನ್ನೂ ಅನುಭವಿಸುತ್ತಿದ್ದರು. ಅವರ ನೆಂಟರಿಷ್ಟರ ಮನೆಗೆ ಕಾಫಿ ಬೀಜ ಸರಬರಾಜು ಮಾಡಲು ಕದ್ದು-ಮುಚ್ಚಿ ಮಾಡಬೇಕಿತ್ತು. ಈಗ ಮುಕ್ತ ಮಾರುಕಟ್ಟೆ ವ್ಯವಸ್ತೆ ಇದೆ.

ಮಲೆನಾಡಿನ ತರಹೇವಾರಿ ಹೂವುಗಳಿಂದ ವಾಣಿಜ್ಯ ಉಪಯೋಗ ಹೊಂದುವ ಉದ್ದಿಶ್ಯದಿಂದ, ಸಹಕಾರಿ ತತ್ವದಡಿ ನಮ್ಮೂರಲ್ಲಿ ಒಂದು ಜೇನುಸಾಕಣೆ ಗಾರರ ಹಾಗು ಮಾರಾಟ ಸಹಕಾರ ಸಂಘ ಪ್ರಾರಂಭ ವಾಯಿತು. ಇದರ ಮೂಲಕ ಉತ್ಕೃಷ್ಟ ಜೇನು ದೊರಕುತ್ತಿತ್ತು. ಬಾಲ್ಯದಲ್ಲಿ ನಾವು ಈ ಸೊಸೈಟಿಗೆ ಹೋದರೆ ನಮಗೆ ತೃಪ್ತಿಯಾಗುವಷ್ಟು ಕುಡಿಯಲು ಜೇನು ಪುಕ್ಕಟೆಯಾಗಿ ಕೊಡುತ್ತಿದ್ದರು. ಅಲ್ಲದೆ ಸಿಹಿ ಇಷ್ಟಪಡುವ ನಮಗೆ ಮನೆಯಲ್ಲೂ ರೊಟ್ಟಿ, ದೋಸೆ, ಇಡ್ಲಿ ಮುಂತಾದ ತಿಂಡಿಗಳಿಗೆ ಜೇನು ಹಾಗು ಬೆಣ್ಣೆಕಾಸಿದ ತುಪ್ಪ ಹಾಕಿ ನೆಂಚಿಕೊಳ್ಳಲು ಕೊಡುತ್ತಿದ್ದರು. ಅದನ್ನು ಸವಿದ ನಾವೇ ಪುಣ್ಯವಂತರು. ನಮ್ಮ ಮನೆಯಲ್ಲಿ ಮೂರು-ನಾಲ್ಕು ಎಮ್ಮೆ ಸಾಕಿದ್ದರು. ಹಾಗಾಗಿ ನಮಗೆಲ್ಲ ಹಾಲು-ಮೊಸರಿನ, ಬೆಣ್ಣೆಯ ತುಪ್ಪದ ಕೊರತೆಯಿರಲಿಲ್ಲ. ಧಂಡಿಯಾಗಿ ತಿಂದು ತೇಗುತ್ತಿದ್ದೆವು. ನಮ್ಮೂರಲ್ಲಿ ಸಿಗುತ್ತಿದ್ದ ಅಪ್ಪಟ ಜೇನಿನ ಮುಂದೆ ಬೇರೆ ಯಾವ ಜೇನೂ ಸೊಗಸುತ್ತಿರಲಿಲ್ಲ. ನಮಗೆ ಬೇರೆ ಊರಿಗೆ ಹೋದಾಗ ಈ ಅನುಭವವಾಗುತ್ತಿತ್ತು. ನಮ್ಮ ಮನೆಗೆ ಬಂದ ನೆಂಟರಿಷ್ಟರಿಗೆ ನಮ್ಮಲ್ಲಿಂದಲೇ ಏಲಕ್ಕಿ, ಜೇನು, ಕರಿಮೆಣಸು ಸರಬರಾಜಾಗುತ್ತಿತ್ತು. ಈಗಲೂ ಜೇನು ಸೊಸೈಟಿ ಇದೆ. ಆದರೆ ಜೇನು ಸಂಗ್ರಹಣೆ ಕಡಿಮೆಯಾಗಿದೆ. ಹಿಂದಿನಷ್ಟು ಪರಿಮಳಭರಿತ ಹೂವುಗಳು ಹಾಗು ದುಂಬಿಗಳ ಕೊರತೆ ಇಳುವರಿ ಕಡಿಮೆಯಾಗಿದ್ದಕ್ಕೆ ಕಾರಣವಂತೆ. ಆಧುನಿಕ ರಸಗೊಬ್ಬರ, ಕೀಟನಾಶಕಗಳ ಅತಿ ಬಳಕೆಯ ಪರಿಣಾಮವಿದು. ದೊರೆಯುವ ಜೇನು ಹಿಂದಿನ ಗುಣಮಟ್ಟದಲ್ಲಿಲ್ಲ ಎಂದು ನನ್ನ ಅನಿಸಿಕೆ.

ಆನೆ ಗುಡ್ಡ ಪ್ರದೇಶ, ಸಕಲೇಶಪುರ 
ಈಗ ಪರಿಸ್ಥಿತಿಯ ಕೈಗೊಂಬೆಯಾಗಿ ನಗರವಾಸಿಯಾಗಿರುವ ನಮಗೆ ಅಂದಿನ ದಿನಗಳನ್ನು ನೆನೆದಾಗ ಪುಳಕ ಉಂಟಾಗುತ್ತದೆ. ಎಷ್ಟೆಲ್ಲ ಮುಂದುವರೆದರೂ ಅಂದಿನ ಮುಗ್ದತೆ, ನೈರ್ಮಲ್ಯ ಪರಿಸರ ಎಂದೆಂದೂ ದೊರಕಲಾರದೇನೋ ಎನಿಸುತ್ತದೆ.

ಎಲ್ಲಿ ಹೋದವೋ ಆ ದಿನಗಳು...

--
ನಂಜುಂಡಸ್ವಾಮಿ  





       

2 comments:

  1. Aa dinagalu yellu hogilla ! Nimma manassina angaladalli goodu katti kulitide. Iga adannu hora bittu namagu Aa jenina savi una badisiddakke dhanyavadagalu. Nimma nenapina saramale heege moonduvariyali.

    ReplyDelete
  2. Its very nice... Succinct... Makes you wanting to read more...

    ReplyDelete